Friday, June 8, 2012

ಮೂಲವ್ಯಾಧಿ ನಿವಾರಣೆಗೆ 20 ರೀತಿಯ ಮನೆಮದ್ದು


ಮೂಲವ್ಯಾಧಿ ಬಂದರೆ ಆಹಾರಕ್ರಮದಿಂದ ಗುಣಪಡಿಸಬಹುದು. ಅದರಲ್ಲೂ ಈ ಕೆಳಗಿನ ಆಹಾರಗಳನ್ನು ಸೇವಿಸಿದರೆ ಮೂಲವ್ಯಾಧಿ ಗುಣಮುಖವಾಗಲು ಸಹಕಾರಿಯಾಗಿದೆ.
20 home remedies for piles

1. ಲೋಳೆರಸದ ತಿರುಳನ್ನು ಒಂದು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. ನಂತರ ಮಲುಗುವ ಮುನ್ನ ಒಂದು ಚಮಚ ಏಲಕ್ಕಿ ಮತ್ತು ಬಾಳೆ ಹಣ್ಣು ತಿನ್ನಬೇಕು. ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಹಚ್ಚಿದರೆ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ. ಇದರಿಂದ ನೋವು ಉಂಟಾಗುವುದಿಲ್ಲ.
2. ಹಾಲಿನಲ್ಲಿ ಒಣ ಖರ್ಜೂರ ಅಥವಾ ಉತ್ತುತ್ತೆಯನ್ನು ರಾತ್ರಿಯಲ್ಲಿ ನೆನೆಯಿಟ್ಟು ಬೆಳಗ್ಗೆ ತಿನ್ನಬೇಕು.
3. ಒಂದು ಈರುಳ್ಳಿಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.
4. ಮೂಲಂಗಿ ಸೊಪ್ಪಿನ ರಸಕ್ಕೆ ಚಿಟಿಕೆಯಷ್ಟು ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಬಾರಿಯಂತೆ ಎರಡರಿಂದ ಮೂರು ವಾರ ಕುಡಿದರೆ ಮೂಲವ್ಯಾಧಿ ಗುಣವಾಗುವುದು. ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು ಕೂಡ ಒಳ್ಳೆಯದು.
5. ಸುವರ್ಣ ಗೆಡ್ಡೆಯನ್ನು ಸಿಪ್ಪೆ ತೆಗೆದು ಒಣಗಿಸಿ ಕುಟ್ಟಿ ಪುಡಿ ಮಾಡಿ, ಆ ಪುಡಿಯನ್ನು ಪ್ರತಿ ದಿನ ಒಂದು ಚಮಚದಂತೆ ಜೇನುತುಪ್ಪಬೆರೆಸಿ ತಿನ್ನುವುದು ಒಳ್ಳೆಯದು.
7. ಹುಣಸೆ ಹಣ್ಣಿನ ಮರದ ಚಿಗುರು ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು.
8. ತುಳಸಿ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

9. ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.
10. ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು.
11. ಸೌತೆಕಾಯಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
12. 4 ಚಮಚ ಕೊತ್ತಂಬರಿಯನ್ನು 4 ಲೋಟ ನೀರು ಹಾಕಿ ಕುದಿಸಿ ಹಾಲು ಮತ್ತು ಸಕ್ಕರೆ ಹಾಕಿ ಟೀ ಬದಲು ಕುಡಿಯುವುದು ಒಳ್ಳೆಯದು. ಆಗ ತಾನೇ ಕರೆದ ಹಾಲಿಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿ ಕುಡಿದರೆ ಮೂಲವ್ಯಾಧಿ ಗುಣಮುಖವಾಗುವುದು.
13. ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ.
14. ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪುಡಿಯನ್ನು ದಿನಕ್ಕೆ ಎರಡು ಚಮಚದಂತೆ ಮುಂಜಾನೆ ಮತ್ತು ಸಂಜೆ ಜೇನಿನೊಡನೆ ಸೇವಿಸಿ.
15. ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೇರಳೆ ಹಣ್ಣು ಬಹಳ ಒಳ್ಳೆಯದು. ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಮೂಲವ್ಯಾಧಿ ಗುಣವಾಗುವುದು.
16. ಮೂಲಂಗಿಯನ್ನು ತುರಿದು ಮೊಸರಿನಲ್ಲಿ ಕಲೆಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟು, ಈ ಪದಾರ್ಥವನ್ನು ಅನ್ನದ ಜೊತೆ ತಿನ್ನುವುದು ಒಳ್ಳೆಯದು. ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಅದನ್ನು ಗುದದ್ವಾರದ ಸುತ್ತಲೂ ಹಚ್ಚಿದರೆ ಊತ ಕಡಿಮೆ ಆಗುತ್ತದೆ.
17. ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು.
18. ತ್ರಿಫಲಾ ಕಷಾಯ ಮೂಲವ್ಯಾಧಿ ಗುಣಪಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ.
19. ಎಂಟು ಲೋಟ ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ.
20. ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು ಕೂಡ ಮೂಲವ್ಯಾಧಿಗೆ ಪರಿಣಾಮಕಾರಿಯಾದ ಔಷಧಿಯಾಗಿದೆ. 
by: Reena                         ಕೃಪೆ : ಒನ್ ಇಂಡಿಯಾ

ಸುಖನಿದ್ರೆಯ ಸೂತ್ರಗಳು

ನಾರೋಗ್ಯಕ್ಕೆ ಕಾರಣಗಳನ್ನು ಹುಡುಕುವುದಾದರೆ ನಾವು ಎಲ್ಲವನ್ನೂ ದೂರುತ್ತೇವೆ. ಆಹಾರ ಅಭ್ಯಾಸ, ಕೆಲಸದ ಒತ್ತಡ, ಅನುವಂಶಿಕ ಕಾರಣ, ರಾತ್ರಿ ಪಾಳಿ ಕೆಲಸ... ಹೀಗೆ.
ಆದರೆ ಎಲ್ಲಕ್ಕಿಂತ ಮುಖ್ಯವಾದ ಕಾರಣವನ್ನೇ ಅರಿಯುವುದಿಲ್ಲ. ಅನಾರೋಗ್ಯಕ್ಕೆ ಮೂಲ ಕಾರಣ ಸಮರ್ಪಕ ನಿದ್ದೆಯಾಗದೇ ಇರುವುದು. ಸುಖ ನಿದ್ರೆ ಹಾಗೂ ಸ್ವಾಸ್ಥ್ಯಮಯ ನಿದ್ದೆ. ನಮ್ಮ ಜೀವನದ 1/3ನೇ ಅಂಶವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಆದರೆ ಅದೂ ಸುಖಕರವಾಗಿರದಿದ್ದರೆ ಸ್ವಾಸ್ಥ್ಯ, ದೇಹ ಪ್ರಕೃತಿಯ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಪೋಲಿಫ್ಲೆಕ್ಸ್ ಎಂಟರಪ್ರೈಸಸ್‌ನ ಎಂ.ಡಿ. ಆನಂದ್ ನಿಚಾನಿ ಹೇಳುತ್ತಾರೆ.
ಅವರ ಪ್ರಕಾರ ನಮ್ಮ ಹಾಸಿಗೆ ಸೂಕ್ತವಾಗಿ ವಿನ್ಯಾಸಗೊಳಿಸದಿದ್ದಲ್ಲಿ ಸುಖಕರ ಇದ್ದೆ ಬರುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ನಮ್ಮ ದಣಿದ ದೇಹವು ವಿಶ್ರಾಂತಿಗಾಗಿ ಒರಗಿದಾಗ ದೇಹದ ಆಕಾರಕ್ಕೆ ತಕ್ಕಂತೆ ಹಾಸಿಗೆ ಇರಬೇಕು. ನಿಸರ್ಗ ಸ್ನೇಹಿ ಹಾಸಿಗೆ ಇದ್ದರೆ ದೇಹದ ಉಷ್ಣತೆಯನ್ನು ಕಾಪಾಡುವುದು ಸಾಧ್ಯವಾಗುತ್ತದೆ. ದೇಹ ವಿಶ್ರಮಿಸುವಾಗ ಜೀವಕೋಶಗಳ ಪ್ರಕ್ರಿಯೆ ಆರಂಭವಾಗುತ್ತದೆ. ಚರ್ಮದ ಕೋಶಗಳೂ ಉಸಿರಾಡುತ್ತವೆ. ಈ ಉಸಿರಾಟದ ಪ್ರಕ್ರಿಯೆ ಸರಳಗೊಳ್ಳುವಂತೆ ನಮ್ಮ ಹಾಸಿಗೆ ಇರಬೇಕು. ನಾವು ಬಳಸುವ ಮೆಟ್ರಸ್ ಕೇವಲ ಮೆತ್ತೆಯಾಗಿದ್ದರೆ ಸಾಲದು. ಅದು ದಣಿದ ದೇಹವನ್ನು ತಂಪುಗೊಳಿಸುವಂತಿರಬೇಕು. ತಾಜಾತನದ ಅನುಭವ ನೀಡುವಂತಿರಬೇಕು.
ಮೆಟ್ರಸ್‌ಗೆ ಬಳಸುವ ಬಟ್ಟೆಯ ವಿಧ ಅತಿ ಮಹತ್ವದ್ದಾಗಿದೆ. ಇದು ಧೂಳು ಹಿಡಿಯದ, ಬ್ಯಾಕ್ಟೀರಿಯಾಗಳಿಗೆ ನೆಲೆಯಾಗದಂತಿರಬೇಕು. ಉಷ್ಣ ತಡೆಯುವ ಗುಣ ಈ ಬಟ್ಟೆಗಿರಬೇಕು. ಮಲಗಿದಾಗ ನಮ್ಮ ಉಸಿರಾಟದೊಂದಿಗೆ ಯಾವುದೇ ಟಾಕ್ಸಿಕ್ ಅಂಶಗಳು ಸೇರ್ಪಡೆಯಾಗದಂತಿರಬೇಕು. ಹಾನಿಕಾರಕ ರಾಸಾಯನಿಕಗಳಿಂದ ಮ್ಯಾಟ್ರಸ್ ತಯಾರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಿಸರ್ಗ ಸ್ನೇಹಿ ಮೆಟ್ರಸ್ ಆಯ್ಕೆ ಮಾಡಿಕೊಳ್ಳುವುದು ಒಳಿತು.
ನಿದ್ದೆಗಾಗಿ ಸಮಯ ನಿಗದಿಗೊಳಿಸುವುದು ಒಳಿತು. ನಿಗದಿತ ಸಮಯಕ್ಕೆ ಮಲಗಿ ಏಳುವುದು ಅತಿ ಮುಖ್ಯ. ಮಲಗುವ ಮುನ್ನ ತೂಕಡಿಸುವುದು, ನಸು ನಿದ್ರೆ ಮಾಡುವುದು ಸುಖ ನಿದ್ದೆಯನ್ನು ಮುಂದೂಡುತ್ತದೆ.
ಕೆಲವೊಮ್ಮೆ ಸಣ್ಣ ತೂಕಡಿಕೆಗಳು ಪುನಶ್ಚೇತನಗೊಳಿಸಬಹುದು. ಆದರೆ ಸುದೀರ್ಘಾವಧಿಯ ತೂಕಡಿಕೆ, ಮೇಲಿಂದ ಮೇಲೆ ನಿದ್ದೆಗೆ ಜಾರುವುದು ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡಬಲ್ಲವು.
ತಲೆದಿಂಬಿನ ಆಯ್ಕೆಯೂ ಸುಖನಿದ್ರೆಗೆ ಸಾಧನವಾಗಬಲ್ಲುದು. ಕತ್ತು ಹಾಗೂ ಭುಜಕ್ಕೆ ಆಧಾರವಾಗಿರುವಂತೆ, ತಲೆಗೆ ಆಸರೆ ನೀಡುವ ದಿಂಬುಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಹೆಚ್
ಚು ಆಹಾರ ಸೇವನೆ, ಮಲಗುವ ಮುನ್ನ ಮಾದಕ ಪೇಯಗಳ ಸೇವನೆ, ಮದ್ಯ ಸೇವನೆ ಇವೆಲ್ಲವೂ ಸುಖ ನಿದ್ರೆಗೆ ಮಾರಕವಾಗಿರುತ್ತವೆ ಎನ್ನುತ್ತಾರೆ ಆನಂದ್ ನಿಚಾನಿ.
ತಮ್ಮ ಪೊಲಿಫ್ಲೆಕ್ಸ್ ಉತ್ಪನ್ನಗಳಲ್ಲಿ ಒಂದಾದ ಮ್ಯಾಗ್ನಿಫ್ಲೆಕ್ಸ್ ಸುಖ ನಿದ್ರೆಗಾಗಿ ಪರಿಸರ ಸ್ನೇಹಿ ಮೆಟ್ರೆಸ್‌ಗಳನ್ನು ತಯಾರಿಸುವ ಕಂಪೆನಿಯಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರಿಗೆ ಸುಖಕರ ನಿದ್ದೆಯ ಸಂತೃಪ್ತಿಯನ್ನು ನೀಡುವಲ್ಲಿ ಶ್ರಮಿಸುತ್ತಿದೆ.
ಕೃಪೆ : ಪ್ರಜಾವಾಣಿ

Wednesday, June 6, 2012

ನೀಲಿ ಚಿತ್ರಗಳ ಹಿಂದಿನ ಕರಾಳ ವಾಸ್ತವ !


ಸಂತೋಷ್ ನಾಯಕ್.ಆರ್,ಮೈಸೂರು


2002ರಲ್ಲೇ ಅಮೆರಿಕದ ದೇಶದ ನೀಲಿ ಚಿತ್ರಗಳ (ಬ್ಲೂ ಫಿಲಂ) ವಹಿವಾಟು 50 ಸಾವಿರ ಕೋಟಿ ರೂ ದಾಟಿತ್ತು. ಈಗ ಅದು ದುಪ್ಪಟ್ಟಾಗಿರುವ ಸಾಧ್ಯತೆ ಇದೆ. ಇಂದು ಇಂಟರ್‌ನೆಟ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಅದರ ಮೂಲಕ ನೀಲಿ ಚಿತ್ರಗಳ ವಹಿವಾಟು ಬೃಹತ್ತಾಗಿ ಬೆಳೆಯುತ್ತಿದೆ. ಮೀಡಿಯಾ ಮ್ಯೋಟ್ರಿಕ್ಸ್ ಎಂಬ ಸಂಸ್ಥೆ ನಡೆಸಿದ ಸರ್ವೆ ಪ್ರಕಾರ ಶೇ.42.7 ರಷ್ಟು ಜನ ಇಂಟರ್‌ನೆಟ್ಟನ್ನು ನೀಲಿ ಚಿತ್ರಗಳನ್ನು ನೋಡಲು ಬಳಸುತ್ತಾರೆ. ಆತಂಕದ ಸಂಗತಿ ಎಂದರೆ  ಇಂಟರ್‌ನೆಟ್ ಮೂಲಕ ಲೈಂಗಿಕ ಚಿತ್ರಗಳನ್ನು ನೋಡುವವರಲ್ಲಿ ಹೆಚ್ಚಿನವರು 12 ರಿಂದ 17ರ ವಯೋಮಾನದವರು.

ಭಾರತದಲ್ಲೂ ಇಂದು ಕಂಪ್ಯೂಟರ್, ಮೊಬೈಲ್‌ಗಳ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. ನೀಲಿ ಚಿತ್ರಗಳ ತಯಾರಿಕೆಯೂ ಜೋರಾಗಿದೆ. ಅವನ್ನು ಎಲ್ಲಿ, ಯಾರು ತಯಾರಿಸುತ್ತಾರೆ ಇತ್ಯಾದಿ ವಿವರಗಳು ಯಾರಿಗೂ ಗೊತ್ತಾಗುವುದಿಲ್ಲ. ಆದರೂ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತಿದೆ. ಇಂದು ಮೊಬೈಲ್‌ಗಳಲ್ಲೇ ಇಂಥ ಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಎಲ್ಲೆಂದರಲ್ಲಿ ವೀಕ್ಷಿಸಬಹುದು.

ಇದೊಂದು ಕಾಳ ದಂಧೆ. ತನ್ನದೇ ಜಾಲದ ಮೂಲಕ ನಡೆಯುವ ಕಾನೂನುಬಾಹಿರ ಅವ್ಯವಹಾರ. ನೀಲಿ ಚಿತ್ರಗಳನ್ನು  ನೋಡುವವರ ಮಾನಸಿಕ ಸ್ಥಿತಿ ವಿಶೇಷವಾಗಿ ಮಕ್ಕಳ ಮೇಲೆ ಬೀರುವ ಪರಿಣಾಮ ಕುರಿತು ವಿಶೇಷ ಅಧ್ಯಯನ ನಡೆಯಬೇಕಿದೆ.

ನೀಲಿ ಚಿತ್ರಗಳ ನಿರ್ಮಾಣದಲ್ಲಿ ಕಪ್ಪು ಹಣ ಯಥೇಚ್ಛವಾಗಿ ಬಳಕೆಯಾಗುತ್ತದೆ. ಇದರಲ್ಲಿ ಭೂಗತ ಜಗತ್ತಿನ ವ್ಯಕ್ತಿಗಳಿದ್ದಾರೆ. ಇದೊಂದು ವಿಷ ವೃತ್ತ. ಅದನ್ನು ಬೇಧಿಸಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಗಮನ ನೀಡಬೇಕಿದೆ.

ತೀವ್ರ ಸ್ವರೂಪದ ಕೌಟುಂಬಿಕ ಸಮಸ್ಯೆಗಳು, ಹಣಕಾಸಿನ ಕೊರತೆ, ಸಂಬಂಧಗಳ ಅಭಾವ, ಬಾಲ್ಯದಲ್ಲಿ  ಲೈಂಗಿಕ ಶೋಷಣೆಗೊಳಗಾದವರು ಮತ್ತು ಉತ್ತಮ ಜೀವನ ನಡೆಸಬೇಕೆಂಬ ಆಸೆ ಹೊತ್ತ ಯುವತಿಯರನ್ನು ನೀಲಿ ಚಿತ್ರಗಳ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಾರೆ. ಇಂತಹ ಚಿತ್ರಗಳ ತಯಾರಿಕೆಗಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಗಂಡಸರು ಮದ್ಯ, ಮಾದಕ ವಸ್ತು ಸೇವನೆಯ ವ್ಯಸನಿಗಳೇ. ಅವರಲ್ಲಿ ಬಹುತೇಕ ಜನರು ಉದ್ದೀಪನ ಔಷಧ ಬಳಸುತ್ತಾರೆ.

ಈ ವೃತ್ತಿಗೆ ಬರಲು ಅನೇಕ ಆಕರ್ಷಣೆಗಳಿವೆ. ಹಾಗೆ ಬಂದ ಯುವತಿಯರು ಕೊನೆ ಕೊನೆಗೆ ಮಾನಸಿಕ ರೋಗಿಗಳಾಗುತ್ತಾರೆ. ಹಲವು ದುಶ್ಚಟಗಳು, ರೋಗಗಳು, ಹತಾಶೆ, ಜಿಗುಪ್ಸೆ, ಒಂಟಿತನ, ಪ್ರೀತಿಯ ಕೊರತೆ ಇತ್ಯಾದಿಗಳಿಂದ ಕೊರಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪುತ್ತಾರೆ.  ನೀಲಿ ಚಿತ್ರಗಳಲ್ಲಿ ನಟಿಸುವ ಯುವತಿಯರಿಗೆ ತಮ್ಮದೇ ಆದ ಖಾಸಗಿ ಜೀವನ ಇರುವುದಿಲ್ಲ. ಅವರು ಬದುಕಿರುವವರೆಗೂ ಒಂದಲ್ಲ ಒಂದು ವಿಧದ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಾರೆ. ಉತ್ತಮ ಸಾಮಾಜಿಕ ಹಾಗೂ ಕೌಟುಂಬಿಕ ಜೀವನ ಸಿಗದೆ ಕೊನೆಗೆ ಎಲ್ಲಿಯೂ ಸಲ್ಲದವರಾಗುತ್ತಾರೆ.

ಇಷ್ಟೆಲ್ಲಾ ಘೋರ ಪರಿಣಾಮಗಳನ್ನು ಉಂಟು ಮಾಡುವ ಹಿನ್ನೆಲೆ ಇರುವ ನೀಲಿ ಚಿತ್ರಗಳು ನೋಡುಗರ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರುತ್ತವೆ? ಮಾನಸಿಕ ತಜ್ಞರ ಪ್ರಕಾರ ನೀಲಿ ಸಿನಿಮಾಗಳನ್ನು ನೋಡುವವರಿಗೆ ಮೊದಲಿಗೆ ಸ್ತ್ರೀಯರ ಮೇಲಿನ ಗೌರವದ ಭಾವನೆಗಳು ಕಡಿಮೆ ಆಗುತ್ತವೆ. ಎಲ್ಲರನ್ನೂ ವಿಕೃತ ಮನಸ್ಸಿನಿಂದ ನೋಡುವ ಗೀಳು ಬೆಳೆಸಿಕೊಳ್ಳುತ್ತಾರೆ.

ಇಂಟರ್‌ನೆಟ್ ಬಳಸುವ ಯುವಕರು ಹಾಗೂ ಇತರ ವಯೋಮಾನದವರ ಪೈಕಿ ಶೇ 25ರಷ್ಟು ಜನ ಲೈಂಗಿಕತೆಗೆ ಸಂಬಂಧಿಸಿದ ವಿಷಯ, ಚಿತ್ರಗಳಿಗಾಗಿ ಹುಡುಕಾಟ ನಡೆಸುತ್ತಾರೆ ಎಂದು `ಸರ್ಚ್ ಇಂಜಿನ್`ಗಳು ಬಹಿರಂಗಪಡಿಸಿವೆ.

ಇಂತಹ ಗೀಳು ಬೆಳೆಸಿಕೊಂಡವರು ಮನೆಯಲ್ಲಿ ಹೆಂಡತಿ ಜತೆ ಅಮಾನುಷ ವರ್ತನೆ ತೋರುತ್ತಾರೆ. ಅಂಥವರಲ್ಲಿ ಸಹಜ ಭಾವನೆಗಳು ಬತ್ತಿ ಹೋಗುತ್ತವೆ. ಇಂಟರ್‌ನೆಟ್‌ನಲ್ಲಿ ನೋಡಿದ ಲೈಂಗಿಕ ಚಿತ್ರಗಳನ್ನು ಕಲ್ಪಿಸಿಕೊಂಡು ತಮ್ಮ ಸಂಗಾತಿಯೊಂದಿಗೆ ಕೂಡುತ್ತಾರೆ. ಲೈಂಗಿಕ ಚಿತ್ರಗಳನ್ನು ನೋಡುವ ಚಟಕ್ಕೆ ಬಲಿಯಾದ ಮಕ್ಕಳಂತೂ ತಮ್ಮ ಓದು, ಜೀವನ ರೂಪಿಸಿಕೊಳ್ಳುವ ಅವಕಾಶಗಳನ್ನು ತಪ್ಪಿಸಿಕೊಳ್ಳುತ್ತಾರೆ. ಲೈಂಗಿಕ ವಿಕೃತಿಗೊಳಗಾಗುವುದು, ಇತರ ಮಕ್ಕಳ ಮೇಲೆ ದೌರ್ಜನ್ಯವೆಸಗುವುದು ಇತ್ಯಾದಿ ಅಪರಾಧಗಳಲ್ಲಿ ತೊಡಗುತ್ತಾರೆ.

ಅಮೆರಿಕದ  ಕ್ಯಾಲಿಫೋರ್ನಿಯಾದಲ್ಲಿ  ನೀಲಿ ಚಿತ್ರಗಳಲ್ಲಿ ನಟಿಸುವ 1500 ಜನ ನಟ ನಟಿಯರಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಪೈಕಿ 41 ಮಂದಿ ಕೊಲೆ, ಆತ್ಮಹತ್ಯೆ ಮತ್ತು ಏಡ್ಸ್‌ಗಳಿಂದ ಅಸುನೀಗಿದ್ದಾರೆ. 28 ಜನ ವಿವಿಧ ಕ್ಯಾನ್ಸರ್ ಹಾಗೂ ಮಾದಕ ಔಷಧಿಗಳ ಸೇವನೆ ಕಾರಣದಿಂದ ಸತ್ತಿದ್ದಾರೆ. ಶೇ 66 ರಷ್ಟು ಜನರಿಗೆ ವಿವಿಧ ಲೈಂಗಿಕ ರೋಗಗಳಿವೆ. ಶೇ 7ರಷ್ಟು ಜನರು ಎಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ!

ನೀಲಿ ಚಿತ್ರಗಳ ನಟರನ್ನು ಅವರ ವೃತ್ತಿಯಿಂದ ಹೊರತಂದು ಅವರಿಗೆ ಸಾಮಾನ್ಯ ಜೀವನ ನಡೆಸಲು ಸಹಾಯ ಮಾಡುತ್ತಿರುವ `ಪಿಂಕ್ ಕ್ರಾಸ್ ಫೌಂಡೇಶನ್` ಎಂಬ ಸಂಸ್ಥೆಯ ಸಂಚಾಲಕಿ ಹಾಗೂ ನೀಲಿ ಚಿತ್ರಗಳ ಮಾಜಿ ನಟಿಯೂ ಆದ ಶೆಲ್ಲಿ ಲೂಬೆನ್ ಬರೆದಿರುವ `ಟ್ರೂಥ್ ಬಿಹೈಂಡ್ ದಿ ಫ್ಯಾಂಟಸಿ ಆಫ್ ಪೋರ್ನ್` ಎಂಬ ಪುಸ್ತಕ ಯೂರೋಪ್‌ನಲ್ಲಿ ಬಹಳ ಜನಪ್ರಿಯವಾಗಿದೆ. ನೀಲಿ ಚಿತ್ರಗಳ ಹಿಂದಿನ ಕರಾಳ ಕಥೆಗಳನ್ನು ಅದು ತೆರೆದಿಡುತ್ತದೆ. ಅವಳ ಜೀವನವೂ ದುರಂತಗಳಿಂದ ಕೂಡಿದ್ದರೂ ಈಗ ಆಕೆ ಸಾಮಾನ್ಯ ಗೃಹಸ್ಥ ಜೀವನ ನಡೆಸುತ್ತಿದ್ದಾಳೆ.

ನೀಲಿ ಚಿತ್ರಗಳ ತಯಾರಿಕೆ ಭಾರತದಲ್ಲೂ ನಡೆಯುತ್ತಿದೆ. ಅಮೆರಿಕಾ ಮತ್ತಿತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿನ ಈ ದಂಧೆ ಅಷ್ಟು ದೊಡ್ಡದಾಗಿ ಬೆಳೆದಿಲ್ಲ.
 ನಿಸರ್ಗದತ್ತ ಲೈಂಗಿಕ ಕ್ರಿಯೆಯನ್ನು ವಿಕೃತವಾಗಿ ತೋರಿಸಿ ಹದಿ ಹರೆಯದವರು ಹಾಗೂ ಯುವ ಜನರನ್ನು ಹಾದಿ ತಪ್ಪಿಸುತ್ತಿರುವ ಈ ಕೃತ್ಯವನ್ನು ತಡೆಯುವ ಹೊಣೆ ಎಲ್ಲರದ್ದು. ಆದರೆ ಅದನ್ನು ಕಾನೂನು ಮೂಲಕ ನಿಯಂತ್ರಿಸುವ ಹೊಣೆ ಸರ್ಕಾರದ್ದು.

ಕೃಪೆ : ಪ್ರಜಾವಾಣಿ