Monday, January 30, 2012

ಚೆನ್ನಾಗಿ ತಿನ್ನಿ: ದೇಹ ಸೌಂದರ್ಯ ಕಾಪಾಡಿಕೊಳ್ಳಿ !




ನಾನು ಯಾವತ್ತೂ ಉಪವಾಸವಿರಲಿಲ್ಲ. ಹಸಿವಿನಿಂದ ಕೊರಗಲಿಲ್ಲ. ತಶ್ನ್ ಸಿನಿಮಾಗಾಗಿ ಸೈಜ್ ಜೀರೊ ಇದ್ದಾಗಲೂ ಚೆನ್ನಾಗಿ ತಿಂತಾ ಇದ್ದೆ. ಹೀಗೆನ್ನುವ ಕರೀನಾ ಕಪೂರ್ ಯುವತಿಯರಿಗೆ ತಮ್ಮ ಸಪೂರ ದೇಹದ ದೇಖರೇಖಿಯ ಕುರಿತು ಹೇಳಿಕೊಂಡಿದ್ದಾರೆ.
`ಚೆನ್ನಾಗಿ ತಿನ್ನಿ. ಉಪವಾಸದಿಂದ ದೇಹ ಕೃಶವಾಗುತ್ತದೆಯೇ ಹೊರತು ಸೌಂದರ್ಯ ಉಳಿಸಿಕೊಳ್ಳುವುದಿಲ್ಲ. ಪಂಜಾಬಿ ಯುವತಿಯಾಗಿ ನಾನು ತಿಂಡಿಪೋತಿ ಎಂದೇ ಹೇಳಬಲ್ಲೆ. ಪ್ರತಿದಿನವೂ ನಾನು ಪರಾಠಾಗಳನ್ನು ಸೇವಿಸುತ್ತೇನೆ. ಆಲೂ, ಗೋಬಿ ಮುಂತಾದ ಪರಾಠಾಗಳು ನನ್ನಿಷ್ಟದ ತಿಂಡಿ. ತಿನ್ನುವುದು ಮುಖ್ಯವಲ್ಲ. ಸರಿಯಾದ ಸಮಯದಲ್ಲಿ ತಿನ್ನುವುದು, ನಂತರದ ದೇಹದಂಡನೆ ಮುಖ್ಯ. ಸದ್ಯಕ್ಕೆ ಸೈಜ್ ಜೀರೊ ಲೊಲೊಗೆ ಸಲ್ಲಬೇಕು. ಅವಳೀಗ ಸಪೂರ ಸುಂದರಿ` ಎಂದು ತಮ್ಮ ಸಹೋದರಿ ಕರಿಶ್ಮಾಳನ್ನು ಹೊಗಳುತ್ತಾರೆ.

Wednesday, January 25, 2012

ಸರ್ವ ರೋಗಕ್ಕೂ ನೀರೇ ಮದ್ದು...

                                              

ನೀರೆಗೂ ನೀರಿಗೂ ಅವಿನಾಭಾವ ಸಂಬಂಧ. ಮನೆ ಮುನ್ನಡೆಸುವ ಗೃಹಿಣಿಗೆ ನೀರಿಲ್ಲದೇ ಒಂದು ಕ್ಷಣವೂ ಇರಲಾಗದು. ಗುಣಧರ್ಮದಲ್ಲೂ ನೀರು-ನೀರೆಯರಲ್ಲಿ ಹಲವು ಸಾಮ್ಯವಿದೆ.
ಶಾಂತ ತಿಳಿನೀರಿದ್ದಂತೆಯೇ ಹೆಣ್ಣು ಸಹ. ಆಕೆಯಲ್ಲಿ ಹುದುಗಿರಬಹುದಾದ ದಿವ್ಯ ಶಕ್ತಿಯ ಅರಿವಿರುವುದಿಲ್ಲ. ಒಂದೊಮ್ಮೆ ಆಕೆಯ ಸಂಯಮದ ಕಟ್ಟೆಯೊಡೆದರೆ ಎದುರು ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಅಂತೆಯೇ ಕಟ್ಟೆಯೊಡೆದುಕೊಂಡ ನೀರನ್ನೂ ತಡೆಯಲು ಸಾಧ್ಯವಿಲ್ಲ. ನೀರೆಂದರೆ ಅದು ಅನಂತ ಸೌಂದರ್ಯ, ಹಾಗೆಯೇ ನೀರು. ನೀರು ಬದುಕಿನ ಅನಿವಾರ್ಯತೆ, ಹಣ್ಣಿಲ್ಲದೇ ಬದುಕಿದ್ದೀತೆ ? ನೀರ ತಟದಲ್ಲಿ ಎಲ್ಲವೂ ತಂಪು ತಂಪು, ತಾಯ ಮಡಿಲಲ್ಲಿಯೂ ಹಾಗೇ ಅಲ್ಲವೇ ? ಇಂಥ ಅಪೂರ್ವ ಸಂಗಮ ನಿಸರ್ಗ ನಿಯಮಿತ. ದುರದೃಷ್ಟ ಇಂದು ನೀರಿಗಾಗಿಯೇ ಭಾರತೀಯ ನೀರೆಯರು ಸಂಕಷ್ಟದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.
ಇನ್ನು ನೀರು ಹಲವಾರು ಕಾಯಿಲೆಗಳಿಗೆ ಮದ್ದು. ಫಿಸಿಯೋಥೆರಪಿಯಲ್ಲಿ ನೀರಿಗೆ ಬಹಳ ಮಹತ್ವದ ಸ್ಥಾನವಿದೆ. (ಹೈಡ್ರೊಥೆರಪಿ) ವರ್ಲ್‌ಪೂಲ್ ಬಾಥ್, ಕಾಂಟ್ರಾಸ್ಟ್ ಬಾಥ್, ಪೂಲ್ ಥೆರಪಿ ಮುಂತಾದ ಪ್ರಕ್ರಿಯೆಗಳಿವೆ. ವರ್ಲ್‌ಪೂಲ್ ಅಂದರೆ ನೀರು ಒಂದು ನಿರ್ದಿಷ್ಟ ವೇಗದಲ್ಲಿ ಚಕ್ರಾಕಾರದಲ್ಲಿ ಸುತ್ತುತ್ತಿರುವ ಟಬ್ ಅಥವಾ ಕೊಳಾಯಿ. ಇದರಲ್ಲಿ ನೋವಿರುವ ಅಂಗವನ್ನು ಮುಳುಗಿಸಿ ಇಟ್ಟಾಗ ತಿರುಗುತ್ತಿರುವ ನೀರಿನಿಂದಾಗಿ ನೋವಿರುವ ಜಾಗಕ್ಕೆ ರಕ್ತ ಚೆನ್ನಾಗಿ ಪೂರೈಕೆಯಾಗುತ್ತದೆ. ಕಾಂಟ್ರಾಸ್ಟ್ ಬಾಥ್ ಅಂದರೆ ಮೊದಲು ಬೆಚ್ಚಿನ ನೀರಿನಲ್ಲಿ ಸುಮಾರು ೩ ನಿಮಿಷ ಕಾಲ ನೋವಿರುವ ಅಂಗವನ್ನು ಮುಳುಗಿಸಿ ಇಡುವುದು. ನಂತರ ಸಾದಾ ನೀರಿನಲ್ಲಿ ಒಂದು ನಿಮಿಷ ಮುಳುಗಿಸಿ ಇಡುವುದು. ಪೂಲ್ ಬಾಥ್ ಅಂದರೆ ದೊಡ್ಡ ಕೊಳದಲ್ಲಿ ಇಡೀ ದೇಹಕ್ಕೆ ಚಿಕಿತ್ಸೆ ನೀಡುವುದು. ಇದು ಹೈಪರ್ ಆಕ್ಟಿವ್ ಮಕ್ಕಳಿಗೆ ಒಳ್ಳೆಯ ಚಿಕಿತ್ಸೆ. ಸಂಪೂರ್ಣ ದೇಹದ ಸ್ನಾಯುಗಳು ಇದರಿಂದ ರಿಲ್ಯಾಕ್ಸ್ ಆಗುತ್ತವೆ.
ಜಲಚಿಕಿತ್ಸೆಯ ಅತ್ಯಂತ ಪ್ರಮುಖ ಅಂಶವೆಂದರೆ ನೀರಿನ ತೇಲಿಸುವ ಶಕ್ತಿ. ತನ್ನಲ್ಲಿ ಮುಳುಗಿರುವ ವಸ್ತುವನ್ನು ನೀರು ಸುಲಭ ವಾಗಿ ಮೇಲೆತ್ತುತ್ತದೆ. ರೋಗಿಗೆ ಕೈಯಲ್ಲಿ ನೋವಿದ್ದಾಗ ಕೈಯನ್ನು ಮೇಲೆ ಎತ್ತುವುದು ಕಷ್ಟ. ಗುರುತ್ವಾಕರ್ಷಣ ಬಲವೇ ಇದಕ್ಕೆ ಕಾರಣ. ಆದರೆ ನೀರಿನಲ್ಲಿ ಅದ್ದಿ ಇಟ್ಟ ಕೈಯನ್ನು ಎತ್ತುವುದು ಸುಲಭ. ನೀರಿನ ಈ ಗುಣದಿಂದಾಗಿ ಕೈಗೆ ಉತ್ತಮ ವ್ಯಾಯಾಮ ಸುಲಭವಾಗಿ ಸಿಗುತ್ತದೆ.
ನೀರಿನ ಬಗ್ಗೆ ಒಂದಷ್ಟು ಅಂಶ ನಿಮಗೂ ತಿಳಿದಿರಲಿ:
*ಊಟದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಆಹಾರ ನಮ್ಮ ರಕ್ತನಾಳಕ್ಕೆ ಸೇರಲು ತುಂಬಾ ಸಹಕಾರಿ.
*ಮಳೆಗಾಲದಲ್ಲಿ ಆಲಿಕಲ್ಲನ್ನು ಹೆಕ್ಕಿಟ್ಟು ಭದ್ರಪಡಿಸಿಟ್ಟುಕೊಳ್ಳಿ. ಚರ್ಮವ್ಯಾ ಸೇರಿದಂತೆ ಹಲವು ರೋಗಕ್ಕೆ ಅದು ಮದ್ದು
*ಪ್ರತಿದಿನ ಆಲಿಕಲ್ಲಿನ ನೀರಿನಿಂದ ಮುಖ ತೊಳೆದರೆ ಸೂಕ್ಷ್ಮ ಮುಖದ ಚರ್ಮಕ್ಕೆ ರಕ್ತ ಸಂಚಾರ ಸರಾಗವಾಗಿ ಚರ್ಮ ಹೊಳೆಪುಪಡೆಯುತ್ತದೆ.
* ಆಲಿಕಲ್ಲಿನ ನೀರಿಗೆ ನಿಂಬೆ ರಸ ಸೇರಿಸಿ ದಿನಕ್ಕೆ ಎರಡು ಬಾರಿ ಮುಖ ತೊಳೆಯುತ್ತಿದ್ದರೆ ಮೂಡವೆ ಮತ್ತು ಮೊಡವೆಯಿಂದ ಉಂಟಾದ ಕಲೆಗಳು ಮಾಯವಾಗುತ್ತವೆ.
* ಆಲಿಕಲ್ಲಿನೊಂದಿಗೆ ಸೇರಿಸಿದ ನಿಂಬೆ ಹಾಗೂ ತುಳಸಿ ರಸ ಹಲವು ಚರ್ಮರೋಗಕ್ಕೂ ಮದ್ದು.
*  ಬೆಳಿಗ್ಗೆ ಎದ್ದ ಕೂಡಲೇ ಬಾಯಿ ತೊಳೆದು ಖಾಲಿ ಹೊಟ್ಟೆಗೆ ನಿಮಗೆ ಸಾಧ್ಯವಾದಷ್ಟು (ಕನಿಷ್ಠ ನಾಲ್ಕರಿಂದ ಆರು ಲೋಟ) ನೀರು ಕುಡಿಯಿರಿ. ನಂತರವೂ ಸಾಧ್ಯವಾದಾಗಲೆಲ್ಲ ನೀರು ಸೇವಿಸಿ ಚರ್ಮದ ಅಂದ, ಮುಖದ ಕಾಂತಿ, ಕಣ್ಣಿನ ಹೊಳಪು ಹೆಚ್ಚುತ್ತದೆ.ದೀರ್ಘಾಯುಸ್ಸು ಖಚಿತ.
* ಗ್ಯಾಸ್‌ಟ್ರಬಲ್, ಅಸಿಡಿಟಿ ಕಾಣಿಸಿಕೊಂಡರೆ ಹೆಚ್ಚು ಹೆಚ್ಚು ತಣ್ಣನೆಯ ನೀರು ಕುಡಿಯುತ್ತ ಬನ್ನಿ. ನಿಯಂತ್ರಣಕ್ಕೆ ಬರುತ್ತದೆ.
* ನೀರು ಅಶುದ್ಧವೆನಿಸಿದರೆ ಬಿಳಿ ಬಟ್ಟೆಯಿಂದ ಸೋಸಿದರಾಯಿತು. ಅಥವಾ ಕುದಿಸಿಟ್ಟುಕೊಳ್ಳಬಹುದು. ಫಿಲ್ಟರ್ ನೀರಾದರೂ ಆಯಿತು. ಅದೆಲ್ಲ ಶುದ್ಧವಾದ ನೀರೇ ಆಗಿದ್ದು, ಉಪಯೋಗಿಸಬಹುದು. ಬದಲಾಗಿ ಬಾಟಲಿ ನೀರು ಬೇಡ.
* ಮನೆಯಲ್ಲಿಯೇ ಸ್ಕಿನ್ ಟಾನಿಕ್ ತಯಾರಿಸಿಕೊಳ್ಳಬಹುದು. ಒಂದು ಲೀಟರ್ ನೀರಿಗೆ ಇಪ್ಪತ್ತು ಫ್ರೆಷ್ ಗುಲಾಬಿಯ ದಳಗಳನ್ನು (ಬಣ್ಣ ಯಾವುದಾದರೂ ಇರಲಿ) ಹಾಕಿ ಸುಮಾರು ಹತ್ತು ನಿಮಿಷ ಕುದಿಸಿಡಿ. ಆರಿದ ನಂತರ ಅದನ್ನು ಸೋಸಿ ಬಾಟಲಿಯಲ್ಲಿ ತುಂಬಿಸಿಡಿ. ಅದೇ ರೋಸ್ ವಾಟರ್. ನೀವು ಹಣ ತೆತ್ತು ತರುವ ಅಗತ್ಯವಿಲ್ಲ.
* ಕಣ್ಣುಗಳಲ್ಲಿ ಉರಿ, ಕಣ್ಣಿನ ಸುತ್ತ ಕಪ್ಪು ಕಲೆ ಇದ್ದವರು ರೋಸ್ ವಾಟರ್‌ಅನ್ನು ಹತ್ತಿಯ ತುಂಡಿನಿಂದ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ರಿಲ್ಯಾಕ್ಸ್ ಆಗಿ ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕಣ್ಣ ಸುತ್ತಲಿನ ಕಲೆ ಮಾಯವಾಗುವುದು.
* ಕಂದು ಇಲ್ಲವೇ ಕಪ್ಪು ಬಣ್ಣದ ತುಟಿ ಸಮಸ್ಯೆಗೆ ಪರಿಹಾರವೆಂದರೆ ರೋಸ್ ವಾಟರಿಗೆ ಪ್ರಮಾಣ ಆಧರಿಸಿ ಜೇನುತುಪ್ಪ ಬೆರೆಸಿ ದಿನಕ್ಕೆ ನಾಲ್ಕೈದು ಬಾರಿ ಸವರಿ ಕೆಂದುಟಿ ನಿಮ್ಮದಾಗುತ್ತದೆ.
ಹೆಜ್ಜಿನ ಪ್ರಮಾಣದಲ್ಲಿ ರೋಸ್ ವಾಟರ್ ತಯಾರಿಸಿಕೊಂಡು ಸ್ನಾನದ ಟಬ್ ತುಂಬಿಸಿಕೊಂಡು ಮುಳುಗಿ ರಿಲ್ಯಾಕ್ಸ್ ಆಗಿ. ಹೀಗೆ ದಿನನಿತ್ಯ ಮಾಡುವುದರಿಂದ ನಿಮ್ಮ ಚರ್ಮ ಕಾಂತಿ ಇಮ್ಮಡಿಗೊಳ್ಳುವುದರ ಜತೆ ಬಣ್ಣವೂ ಬದಲಾಗುತ್ತದೆ.
* ಸ್ನಾನದ ನೀರಿನಲ್ಲಿ ಬೇವಿನ ಎಲೆ ಹಾಕಿಡಿ. ಎಲ್ಲ ಮಾರ್ಜಕಗಳಿಗಿಂತಲೂ ಇದು ಔಷಧಯುಕ್ತ.
* ಲಾವಂಚದ ಬೇರನ್ನು ಸ್ನಾನ ಮಾಡುವಾಗ ನೀರಿಗೆ ಹಾಕಿ ಸ್ನಾನ ಮಾಡಿದರೆ ಮೈಯ ದುರ್ಗಂಧ ದೂರ. ಇದೇ ರೀತಿ ಕುಡಿಯುವ ನೀರಿಗೆ ಲಾವಂಚದ ಬೇರು, ತುಳಸಿ ಹಾಕಿಟ್ಟರೆ ಒಳಿತು.
* ಒಂದು ಲೀಟರ್ ಕುದಿಯುವ ನೀರಿಗೆ ನಾಲ್ಕು ಕಿತ್ತಳೆ ಹಣ್ಣಿನ ಸಿಪ್ಪೆ ಹಾಕಿ ಹತ್ತು ನಿಮಿಷ ಬಿಡಿ. ತಣ್ಣಗಾದ ನಂತರ ಸೋಸಿಕೊಂಡು ಬಾಟಲಿಯಲ್ಲಿ ತುಂಬಿಸಿಡಿ. ನಿಮಗೆ ಬಿಡುವಾದಾಗ ಹತ್ತಿಯ ಸಹಾಯದಿಂದ ಮುಖಕ್ಕೆ ಲೇಪಿಸಿಕೊಳ್ಳಿ. ವಿಟಮಿನ್ ಸಿ ಕಾಸು ಖರ್ಚಿಲ್ಲದೆ ಸಿಗುತ್ತದೆ.
*  ನೀರು ಕುದಿಯುವಾಗ ಒಂದು ಕಟ್ಟು ಪುದೀನಾ ಸೊಪ್ಪು ಹಾಕಿ ಅದರ ಹಬೆಗೆ ಮುಖ ಒಡ್ಡಿ, ಇದರಿಂದಾಗಿ ಮುಖದಲ್ಲಿನ ಜಿಡ್ಡಿನ ಅಂಶ ಹೋಗಿ, ಬ್ಲಾಕ್ ಮತ್ತು ವೈಟ್ ಹೆಡ್ಸ್‌ಗಳು ಮೆತ್ತಗಾಗಿ ಹೊರ ಬರುವವು. ಸುಕ್ಕುಗಳು ಮಾಯವಾಗಿ ಮುಖ ಚರ್ಮ ನಯವಾಗಿ, ಕಾಂತಿಯುತವಾಗಿ ಕಾಣುವುದು. ಮೊಡವೆಗಳು ಕಾಡುವ ಭಯವಿರುವುದಿಲ್ಲ.

‘ಲಾಸ್ಟ್’ಡ್ರಾಪ್ : ನೆನಪಿಡಿ, ಅದು ಎಂಥದೇ ರೋಗವಿರಲಿ, ಎಂಥದ್ದೇ ಸಂದರ್ಭವಿರಲಿ ನೀರಿನಿಂದ ದೂರವಿರುವ ಅಗತ್ಯವಿಲ್ಲ. ಯಾವುದೇ ರೋಗಕ್ಕೆ ನೀರಿನ ಸೇವನೆ ನಿಷಿದ್ಧವಲ್ಲ.

Tuesday, January 24, 2012

ಲಂಚ ಕೇಳಿದ ಅಧಿಕಾರಿಯ ಕಚೇರಿಗೆ ಹಾವುಗಳನ್ನು ಬಿಟ್ಟು ವಿಚಿತ್ರ ರೀತಿಯಲ್ಲಿ ಪ್ರತಿಭಟನೆ !


ಉತ್ತರ ಪ್ರದೇಶ‌, ಡಿ.1: ಲಂಚ ಕೇಳಿದ ಅಧಿಕಾರಿಯ ಕಚೇರಿಗೆ ಹಾವುಗಳನ್ನು ಬಿಟ್ಟು ವಿಚಿತ್ರ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಉತ್ತರ ಪ್ರದೇಶದ ಬಸ್ತಿ ಯಲ್ಲಿ ನಡೆದಿದೆ.  ಇತ್ತೀಚೆಗೆ ಭ್ರಷ್ಟಾಚಾರದ ವಿರುದ್ಧ ಮೂಡಿಸಿರುವ ಜನಜಾಗೃತಿ ವ್ಯಾಪಕವಾಗಿದೆ. ಅದೀಗ ಬಸ್ತಿ ಬಸ್ತಿಯಲ್ಲೂ ಕಾಣಿಸಿಕೊಳ್ಳುತ್ತಿದೆ. ಆದರೆ ವಿಚಿತ್ರವಾಗಿ ಹಾವಿನ ರೂಪದಲ್ಲಿ ಕಾಣಿಸಿಕೊಂಡಿದೆ. ಎಲ್ಲೇ ಆಗಲಿ, ಯಾರೇ ಆಗಲಿ ಲಂಚ ಅಂತ ಕೇಳಿದರೆ ಜನ ಬುಸ್ ಬುಸ್ ಎನ್ನುತ್ತಿದ್ದಾರೆ. ಏನಾಯಿತಪ್ಪಾ ಅಂದರೆ
ಲಂಚದಿಂದ ಬೇಸತ್ತ ವ್ಯಕ್ತಿಯೊಬ್ಬರು ಇದನ್ನು ಅಕ್ಷರಶಃ ಮಾಡಿ ತೋರಿಸಿದ್ದಾರೆ. ಸಾಕ್ಷಾತ್ ಹಾವುಗಳನ್ನೇ ತಂದು ಅವುಗಳಿಂದ ಬುಸ್ ಬುಸ್ ಅನಿಸಿದ್ದಾರೆ. ಅದೂ ಲಂಚ ಕೇಳಿದ ಅಧಿಕಾರಿಯ ಕಚೇರಿಯೊಳಕ್ಕೆ ಸರಿಯಾಘಿ ಒಂದು ಡಜನ್ ಹಾವುಗಳನ್ನು ಬಿಟ್ಟುಬಂದಿದ್ದಾರೆ.
ಲಂಚ ವಿರೋಧಿಗೆ ಇದು ಹೇಗೆ ಸಾಧ್ಯವಾಯಿತಪ್ಪಾ ಅಂದರೆ ಆತ ಹಾವು ಹಿಡಿಯುವುದರಲ್ಲೂ ಎತ್ತಿದ ಕೈ. ಅದಕ್ಕೆ ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಹಕ್ಕುಳು ಎಂಬ ಈ ಹೈಕಳು ಪರಿಸರವಾದಿ. ಆತನಿಗೆ ಸರಕಾರ ಒಂದಷ್ಟು ಜಮೀನು ಮಂಜೂರು ಮಾಡಿತ್ತು. ಆದರೆ ಲಂಚ ನೀಡದಿದ್ದರೆ ಜಮೀನು ಕೊಡೊಲ್ಲ ಎಂದಿದ್ದಾರೆ.
ಇದರಿಂದ ಭ್ರಮನಿರಸನಗೊಂಡ ವ್ಯಕ್ತಿ ಸರಿಯಾಗಿಯೇ ಮಾಡಿದ್ದಾನೆ. ಯಾವ ಹಾವು ಆತನ ಕನಸಿಗೆ ಬಂದು ಇಂತಹ ಐಡಿಯಾ ಕೊಟ್ಟಿತೋ ಅಂತೂ ಆತ ಹಾವುಗಳನ್ನು ಹಿಡಿದುತಂದು ಕಚೇರಿಯೊಳಕ್ಕೆ ಬಿಟ್ಟಿದ್ದಾನೆ.
ಕೃಪೆ : ವಿಶ್ವಕನ್ನಡಿಗ ನ್ಯೂಸ್

Sunday, January 22, 2012

ಹುಚ್ಚುಖೋಡಿ ಮನಸು ...... !

ರಾಧಿಕ ರಾವ್, ಮಲ್ಲೇಸರ, ಪ್ರಥಮ ಎಂಎಸ್ಸಿ , ಆಳ್ವಾಸ್ ಕಾಲೇಜ್, ಮೂಡಬಿದ್ರಿ
 ಯುವಾ
ಪ್ರೀತಿ ಎಂದರೇನು...? ತ್ಯಾಗ ...? ಎಂದರ್ಥವೇ...? ಇಲ್ಲಾ ಇವೆಲ್ಲವನ್ನೂ ಮೀರಿದುದೇ... ಒಂದೇ ಒಂದು ಕುಡಿನೋಟಕ್ಕಾಗಿ ಸಾವಿರ ಪ್ರಾರ್ಥನೆ, ಸಾನಿಧ್ಯವೇ ಸ್ವರ್ಗವೆನಿಸುವ, ಹೊಗಳಿ ಹೊಗಳಿಸಿಳ್ಳುವ ತವಕ. ಸಣ್ಣ ಸಣ್ಣ ವಿಚಾರಕ್ಕೂ ಕಣ್ಣೀರ ಕೋಡಿ... ಅವನಿದ್ದರೆ/ ಅವಳಿದ್ದರೆ... ಮತ್ಯಾರೂ ಬೇಡವೆನಿಸುವ ಹುಚ್ಚು ಕಲ್ಪನೆ.


ಇಲ್ಲಿ, ಪ್ರೀತಿಗೆ ಪ್ರೀತಿಯದ್ದೇ ಧ್ಯಾನ, ಪ್ರೀತಿ ಜೊತೆಗಿದ್ದರೆ ಜಗತ್ತನ್ನೇ ಗೆಲ್ಲುವ ಭ್ರಮೆ. ಪ್ರೀತಿಯೇ ಸರ್ವಸ್ವವೆನಿಸುವ, ತಾಯಿ ತಂದೆಯ ಪ್ರೀತಿಯೂ ಕೂಡಾ ಅಸಹನೀಯವೆನಿಸುವ ಸಮಯ.. ಇದೆಲ್ಲಾ ಆಕರ್ಷಣೆ ಇರುವವರೆಗೂ ಮಾತ್ರ... ಆ ಕ್ಷಣಿಕ ಆಕರ್ಷಣೆಯೊಂದಿಗೆ ಬಂದ ಚಿಕ್ಕದೊಂದು ಬೇಜವಾಬ್ದಾರಿಯ ಬೀಜವೊಂದು ಬದುಕಿನೊಳಗೆ ನುಸುಳಿ ಹೆಮ್ಮರವಾಗಿ, ಬದುಕೇ ಗೆದ್ದಲು ಹಿಡಿದಂತಾದಾಗ.. ಆ ಪ್ರೀತಿಯೇ ನಮ್ಮನ್ನು ಅಣಕಿಸುತ್ತದೆ, ಪಾಪಪ್ರಜ್ಞೆ ಕಾಡುತ್ತದೆ...

ಭವಿಷ್ಯದ ಭದ್ರ ಬುನಾದಿಯಾಗ ಬೇಕಾದ ಕಲಿಕೆಯ, ಹರೆಯದ ದಿನಗಳು... ಮುಂದೆ ತಿದ್ದಲಾರದ ನೆನಪುಗಳಾಗುತ್ತವೆ...
ಆದರೆ, ಎಲ್ಲಾ ಹರೆಯದ ಪ್ರೇಮಗಳು ಹೀಗೆ ಎನ್ನುವಂತಿಲ್ಲ. ಅಲ್ಲಿಯೂ ಕೆಲವೊಂದು ನಿಷ್ಕಲ್ಮಷ ಪಕ್ವ ಪ್ರೀತಿ, ಭವಿಷ್ಯದ ಚಿಂತನೆಯಲ್ಲಿ ಹುಟ್ಟಿದ ಸ್ವಚ್ಛಪ್ರೀತಿ ಹುಡುಕಿದರೆ ಸಿಗಬಹುದು.. ಇವರು ಕ್ಷಣಿಕ ಪ್ರೇಮಕ್ಕಾಗಿ, ಸಾನಿಧ್ಯಕ್ಕಾಗಿ ಹಂಬಲಿಸದೇ ಜೀವನದುದ್ದಕ್ಕೂ ನೆಮ್ಮದಿಯ ನೆರಳಾಗುವ ಪ್ರೀತಿಗಾಗಿ ಪರಿತಪಿಸುತ್ತಾರೆ..

ಈ ರೀತಿಯ ಪ್ರೀತಿಯಲ್ಲಿರುವವರು ಪರಸ್ಪರ ಗೌರವದಿಂದ ಆರಾಧನೆಯ ನಿರಂತರ ಬಾಂಧವ್ಯವನ್ನು ಹೊಂದಿರುತ್ತಾರೆ. ಒಂದಿಷ್ಟು ತ್ಯಾಗದೊಂದಿಗೆ ಭವಿಷ್ಯದ ಸಂತಸದ ಕ್ಷಣಗಳ ಹುಡುಕಾಟದ ಹೋರಾಟ ನೆಡೆಸುತ್ತಾರೆ. ಇದೇನು ಸುಲಭಸಾಧ್ಯವಲ್ಲ. ಹುಚ್ಚು ಕೋಡಿ ಮನಸ್ಸನ್ನು ಹಿಡಿಯುವ ಸಂಯಮಬೇಕು, ಜೊತೆಗೆ ವಿವೇಕವಂಬ ಚುಕ್ಕಾಣಿ ಇರಬೇಕು...

ಪ್ರೀತಿಯ ಗುರಿಸಾಧನೆಯ ದಾರಿ ತುಂಬಾ ಕಿರಿದು. ಅಲ್ಲಿ ಹೊಗಲು ಇಬ್ಬರ ಆಸೆ, ಆಕಾಂಕ್ಷೆ ಯೋಚನಾ ಲಹರಿಗಳು ಒಂದಾಗಬೇಕು.
ಕನಸುಗಳ ತೀರದಲ್ಲಿ ಸವೆಯವ ನೆನಪುಗಳೊಂದಿಗೆ ನಡೆದು ಸಾಗುವ ಮನಸಿದ್ದಾಗ ಮಾತ್ರಾ ಭವಿಷ್ಯದ ಬದುಕು ನೆಮ್ಮದಿಯ ಸೆಲೆಯಾಗುತ್ತದೆ..
ಏನಾದರಾಗಲಿ... ವಾಸ್ತವ ಪ್ರಜ್ಞೆಯ ಬುನಾದಿಯಿಲ್ಲದೆ ಭವಿಷ್ಯದ ಗೋಪುರವನ್ನು ಕಟ್ಟುವುದು ಸಾಧ್ಯವಿಲ್ಲವಲ್ಲವೇ...?
'ಪ್ರೀತಿ' ಸಾಧನೆಯ ಸಂಗಾತಿಯಾಗಲಿ...

`ಅವಳ ದೇಹ ಅವನದಲ್ಲ; ಅವಳದೇ'

ವಿಶ್ವವಿದ್ಯಾಲಯವೊಂದರಲ್ಲಿ ಬೋಧಿಸುತ್ತಿದ್ದ ಆಕೆಗೆ, ಪುರುಷ ಸಹೋದ್ಯೋಗಿಗಳು `ಸಿಂಹ`, `ಶಕ್ತಿ` ಅಂತ ಕಿಚಾಯಿಸಿಯೇ ಇತರರಿಗೆ ಪರಿಚಯಿಸುತ್ತಿದ್ದರು. ಮಹಿಳಾ ಪರವಾದ ನಿಲುವುಗಳಿಂದಾಗಿ ಆಕೆಗೆ ಈ ಬಿರುದುಗಳು ಪುಕ್ಕಟೆಯಾಗಿ ದೊರೆತಿದ್ದವು. ಆದರೆ, ಸಹೋದ್ಯೋಗಿಗಳ ಮಾತಿಗೆ ಸೊಪ್ಪು ಹಾಕದ ಆಕೆ ಅವರ ಕಿಚಾಯಿಸುವಿಕೆಯ ಬಿರುದುಗಳನ್ನೇ ತಿದ್ದಿ `ನಾನು ಸಿಂಹ ಅಲ್ಲ ಸಿಂಹಿಣಿ, ಅಫ್‌ಕೋರ್ಸ್ ನಾನು ಶಕ್ತಿ` ಎಂದು ಹೇಳುತ್ತಲೇ ವಿಶ್ವವಿದ್ಯಾಲಯದಲ್ಲಿ `ಮಹಿಳಾ ಅಧ್ಯಯನ` ವಿಭಾಗ ಆರಂಭಿಸಿದರು.

ಮೊದಮೊದಲು ಬರೀ ಹುಡುಗಿಯರಷ್ಟೇ ಕೋರ್ಸ್‌ಗೆ ಸೇರುತ್ತಿದ್ದ ಆ ವಿಭಾಗದಲ್ಲೆಗ ಪುರುಷರು ಕೂಡಾ ಉನ್ನತ ಸಂಶೋಧನೆ ಕೈಗೊಂಡಿದ್ದಾರೆ. ಅವರಿಗೆಲ್ಲಾ ಪ್ರೇರಕ ಶಕ್ತಿ ಅದೇ ಸಿಂಹಿಣಿ!.

ಹೌದು ಅವರು ಡಾ.ರಂಜನಾ ಹರೀಶ್.


ಗುಜರಾತ್‌ನ ಅಹಮದಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ರಂಜನಾ ಮನಸ್ಸು ಮಾಡಿದ್ದರೆ, ವಿದೇಶಿ ವಿವಿಗಳಲ್ಲಿ ಪ್ರಾಧ್ಯಾಪಕಿಯಾಗಿಯೋ ಅಥವಾ ಕಲಾವಿದೆಯಾಗಿಯೋ (ಅವರು ಹಿಂದೂಸ್ತಾನಿ ಸಂಗೀತ ಗಾಯಕಿ, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ) ಜೀವನ ಕಳೆಯಬಹುದಿತ್ತು.


ಆದರೆ, ವಿದೇಶದಲ್ಲಿ ಓದುತ್ತಿದ್ದ ದಿನಗಳಲ್ಲಿ ಅಲ್ಲಿನ ಮಹಿಳೆಯರ ಸ್ವತಂತ್ರ ಆಲೋಚನೆ, ವ್ಯಕ್ತಿತ್ವದಿಂದ ಪ್ರೇರಿತರಾಗಿದ್ದ ಅವರಿಗೆ, ತಾಯ್ನೆಲ ಭಾರತದಲ್ಲಿ ಅದಕ್ಕೆ ಪಕ್ಕಾ ತದ್ವಿರುದ್ಧ ಪರಿಸರ ಕಂಡು ಬೇಸರ ಉಂಟಾಗುತ್ತಿತ್ತು.


ಸ್ನಾತಕೋತ್ತರ ಪದವಿ, ಪಿಎಚ್.ಡಿ ಪೂರೈಸಿದ ಅವರು ತವರುಮನೆ ಗುಜರಾತ್‌ಗೆ ವಾಪಸ್ ಹೋಗುವ ಮಾತನಾಡಿದಾಗ, ಅವರ ವಿಭಾಗದ ಮುಖ್ಯಸ್ಥ ಹಣ ಮತ್ತು ಅವಕಾಶದ ಮಹಾಪೂರಗಳ ಆಮಿಷ ಒಡ್ಡಿದ್ದರು. ಆದರೆ, ಹೆಸರು, ಹಣದ ಪ್ರಸಿದ್ಧಿಗೆ ಜಗ್ಗದ ರಂಜನಾ ಅವರ ಮನಸ್ಸಿನಲ್ಲಿ ಸದಾ ಕಾಡಿದ್ದು ಭಾರತದ ಗ್ರಾಮೀಣ ಮಹಿಳೆ. ಸ್ವಂತ ನೆಲದಲ್ಲಿ ತನ್ನಂತೆಯೇ ಮಹಿಳೆಯರು ಸಬಲವಾಗಿ ಕಾಲೂರಬೇಕು, ಅದಕ್ಕೆ ನನ್ನ ಓದು ಪೂರಕವಾಗಬೇಕು ಎಂಬ ಹಂಬಲದಿಂದ ವಿದೇಶದಿಂದ ವಾಪಸಾದ ಅವರು ಗುಜರಾತ್ ವಿವಿಯಲ್ಲಿ ಪ್ರಪ್ರಥಮ ಮಹಿಳಾ ಅಧ್ಯಯನ ವಿಭಾಗದ ಸ್ಥಾಪನೆಗೆ ನಾಂದಿ ಹಾಡಿದರು.


ಹತ್ತು ಕೃತಿಗಳನ್ನು ಬರೆದಿರುವ ರಂಜನಾ, ಇಂಡಿಯನ್ ಅಸೋಸಿಯೇಷನ್ ಫಾರ್ ಕೆನಡಿಯನ್ ಸ್ಟಡೀಸ್‌ನ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಎಟಿಸಿ ಅಧಿಕಾರಿಗಳಿಗೆ ಇಂಗ್ಲಿಷ್ ತರಬೇತಿಗಾರ್ತಿಯಾಗಿಯೂ ಕೆಲಸ ಮಾಡಿರುವ ಅವರು, ದೆಹಲಿ ಸಾಹಿತ್ಯ ಅಕಾಡೆಮಿಯ ಸಲಹಾ ಮಂಡಳಿಯ ಸದಸ್ಯೆಯೂ ಹೌದು. 2009ರಲ್ಲಿ ಜಿನೀವಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಲೀಗ್ ಫಾರ್ ಪೀಸ್ ಅಂಡ್ ಫ್ರೀಡಂ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಗುಜರಾತ್‌ನ ಗೋಧ್ರಾ ಹತ್ಯಾಕಾಂಡವೊಂದು `ಡರ್ಟಿ ಪಾಲಿಟಿಕ್ಸ್` ಎಂದೇ ಆಕ್ರೋಶ ವ್ಯಕ್ತಪಡಿಸುವ ರಂಜನಾ ಹರೀಶ್, ಈಚೆಗೆ ದಾವಣಗೆರೆಯಲ್ಲಿ ನಡೆದ ವಿಚಾರಸಂಕಿರಣವೊಂದಕ್ಕೆ ಆಗಮಿಸ್ದ್ದಿದಾಗ ಅವರೊಂದಿಗೆ  ನಡೆಸಿದ ಆಪ್ತ ಮಾತುಕತೆ ಇಲ್ಲಿದೆ.


* ಭಾರತೀಯ ಸ್ತ್ರೀವಾದ ಸಿದ್ಧಾಂತ ಪಾಶ್ಚಾತ್ಯ ಮೂಲದ ಅನುಕರಣೆ ಅನ್ನುವ ಆರೋಪವಿದೆಯಲ್ಲ?

ಆರೋಪ ಮೇಲ್ನೋಟಕ್ಕೆ ನಿಜ ಎನಿಸಬಹುದು. ಆದರೆ, ಪ್ರಾಯೋಗಿಕ ನೆಲೆಯಲ್ಲಿ ನೋಡಿದರೆ ಇಂದಿನ ಭಾರತದ ಗ್ರಾಮೀಣ ಮಹಿಳೆಯೇ ನಿಜವಾದ ನೆಲೆಯಲ್ಲಿ ಸ್ತ್ರೀವಾದವನ್ನು ಜಾರಿಗೆ ತಂದಿದ್ದಾಳೆ, ಹೇಗೆಂದರೆ ಹಿಂದೆ ಮಹಿಳೆಗೆ ಓದುವ, ಮನೆಯ ಹೊಸಿಲಾಚೆ ಕಾಲಿಡಲು ಸ್ವಾತಂತ್ರ್ಯವಿರಲಿಲ್ಲ.

ಆದರೆ, ಇಂದು ಸಣ್ಣ ಹಳ್ಳಿಯೊಂದರ ಹೆಣ್ಣುಮಗಳು ಕೂಡಾ ತನ್ನ ಮಗಳು ತನ್ನಂತಾಗಬಾರದು. ಆಕೆ ಓದಬೇಕು. ನೌಕರಿ ಹಿಡಿಯಬೇಕು. ನಂತರ ಮದುವೆಯಾಗಬೇಕು. ಮದುವೆಯ ನಂತರವೂ ಕೆಲಸ ಬಿಡಬಾರದು ಎಂಬ ಚಿಂತನೆ ಹೊಂದಿದ್ದಾಳೆ. ಅಷ್ಟೇ ಅಲ್ಲ ಆಕೆ ಪುರುಷನಿಗಿಂತ ಭಿನ್ನವಾಗಿ ತನ್ನನ್ನು ಗುರುತಿಸಿಕೊಳ್ಳಲು ಬಯಸುತ್ತಾಳೆ.


ಹಾಗೆ ನೋಡಿದರೆ ಪಾಶ್ಚಾತ್ಯರಲ್ಲಿ ಮೊದಲು ಸಿದ್ಧಾಂತ ರೂಪುಗೊಂಡು ನಂತರ ಪ್ರಾಯೋಗಿಕ ನೆಲೆಯಲ್ಲಿ ಸ್ತ್ರೀವಾದ ಅಭಿವ್ಯಕ್ತವಾಗುತ್ತದೆ. ಆದರೆ, ಭಾರತೀಯ ಮಹಿಳೆ ಸ್ತ್ರೀವಾದದಲ್ಲೇ ಜೀವಿಸಿ, ನಂತರ ತತ್ವ, ಸಿದ್ಧಾಂತದತ್ತ ಗಮನಹರಿಸುತ್ತಾಳೆ. ಹಾಗಾಗಿ, ಬರೀ ತತ್ವ, ಸಿದ್ಧಾಂತ ಎಂದು ಭಾಷಣ ಮಾಡುವ ಸ್ತ್ರೀವಾದಿಗಳಿಗಿಂತ, ಗ್ರಾಮೀಣ ಮಹಿಳೆಯೇ ನಿಜವಾದ ಸ್ತ್ರೀವಾದಿ.
* 37 ವರ್ಷದಿಂದ ಮಹಿಳಾಪರ ಚಿಂತನೆ, ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ನಿಮ್ಮ ದೃಷ್ಟಿಯಲ್ಲಿ ಸ್ತ್ರೀವಾದ ಅಂದರೇನು?
ಮೊದಲೇ ಸ್ಪಷ್ಟಪಡಿಸುತ್ತೇನೆ ಸ್ತ್ರೀವಾದ ಅಂದರೆ ಖಂಡಿತಾ ಪುರುಷ ವಿರೋಧಿ ಅಲ್ಲ. ಹೆಣ್ಣು ಗಂಡಿನಂತೆ ಆಗಬೇಕು ಎಂಬ ಕಲ್ಪನೆಯೇ ತಪ್ಪು. ಹೆಣ್ಣಿಗೆ ತನ್ನದೇ ಆದ ವಿಭಿನ್ನತೆ ಇದೆ.

ಅದು ದೈಹಿಕ ನೆಲೆಯಲ್ಲಾಗಿರಬಹುದು ಅಥವಾ ಮಾನಸಿಕ ನೆಲೆಯಲ್ಲಾಗಿರಬಹುದು. ಪುರುಷನನ್ನು ಅನುಕರಿಸದೇ, ತನ್ನ ಜೈವಿಕ ನೆಲೆಯ ಅಸ್ತಿತ್ವ ಒಪ್ಪಿಕೊಳ್ಳುತ್ತಲೇ ತನ್ನದೇ ಅನನ್ಯ ಗುರುತು ಹೊಂದುವುದೇ ನಿಜವಾದ ಸ್ತ್ರೀವಾದ.
* ಇಂದಿನ ಮಹಿಳೆ ಹೇಗೆ ರೂಪುಗೊಳ್ಳಬೇಕು?
ಮೊದಲು ಆಕೆ  ಭೌತಿಕ ಬದಲಾವಣೆಗೆ ತನ್ನನ್ನು ತೆರೆದುಕೊಳ್ಳಬೇಕು. ಶಿಕ್ಷಣ ಪಡೆಯಲೇಬೇಕು. ನಮ್ಮಲ್ಲಿನ ಬಹುತೇಕ ಮಹಿಳೆಯರಿಗೆ `ಸ್ವಂತ ಸ್ಪೇಸ್` ಕೊರತೆ ಇದೆ.

ಮನೆಯಲ್ಲೇ ಸ್ವಂತ ಸ್ಪೇಸ್ ಪಡೆಯಬೇಕು. ಮುಖ್ಯವಾಗಿ ತನ್ನ ದೇಹ ತನ್ನದಲ್ಲ ಪತಿಯದು ಎಂಬ ಭಾವನೆಯಿಂದ ಆಕೆ ಹೊರಬರಬೇಕು. ಮನಸ್ಸು, ದೇಹ, ಹೃದಯ ಎಲ್ಲವೂ ತನ್ನ ಸ್ವಂತದ್ದು ಎಂದು ಪರಿಭಾವಿಸಿದಾಗ ಆಕೆಗೆ ಆತ್ಮವಿಶ್ವಾಸ ಮೂಡಲು ಸಾಧ್ಯ. ಮಹಿಳೆ `ಗೈನೋಸೆಂಟ್ರಿಕ್` ಆದ ಕಾರಣ ಆಕೆಯ ದೇಹ, ಭಾವನೆಯಲ್ಲಿ ಭಿನ್ನತೆ ಸಹಜ. ಅದನ್ನು ಒಪ್ಪಿಕೊಂಡೇ ತನ್ನದೇ ಸ್ವಂತ ವ್ಯಕ್ತಿತ್ವ ಕಟ್ಟಿಕೊಳ್ಳಲು ಆಕೆ ಖಂಡಿತಾ ಸಮರ್ಥಳು.


`ಮಹಿಳೆಗೆ ಮಹಿಳೆಯೇ ಶತ್ರು` ಎಂಬ ಮಾತು ನಿಜಕ್ಕೂ ಸುಳ್ಳು. ವಾಸ್ತವದಲ್ಲಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಆಕೆಗೆ ಹಿರಿಯ ಮಹಿಳೆಯ ಮಾರ್ಗದರ್ಶನದ ಆವಶ್ಯಕತೆ ಇದೆ.


* ಭಾರತದ ಮಹಿಳೆ-ಕೆನಡಾದ ಮಹಿಳೆ ನಡುವಿನ ಅಂತರ ಹೇಗೆ ಗುರುತಿಸುತ್ತೀರಿ?

ದಶಕಗಳ ಹಿಂದೆ ಕೆನಡಾದಲ್ಲಿ ಮಹಿಳೆಯನ್ನು `ವ್ಯಕ್ತಿ` ಎಂದು ಪರಿಗಣಿಸುತ್ತಿರಲಿಲ್ಲ. ಇದಕ್ಕಾಗಿ ಅಲ್ಲಿನ ಮಹಿಳಾವಾದಿಗಳು ತೀವ್ರ ಹೋರಾಟ ನಡೆಸಿದ ಫಲವಾಗಿ ಇಂದು ಆಕೆಯನ್ನು `ವ್ಯಕ್ತಿ` ಎಂದು ಸ್ವೀಕರಿಸಿ, ಮತದಾನದ ಹಕ್ಕು ದೊರೆತಿದೆ. ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಮಹಿಳೆ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಗೆ ಬಂದಳು.

ಆದರೆ, ಆಕೆ ಇತರ ವಿದೇಶಿ ಮಹಿಳೆಯರಷ್ಟು ಸಬಲತೆ ಸಾಧಿಸಲಿಲ್ಲ. ಏಕೆಂದರೆ ಭಾರತದಲ್ಲಿ ಮಹಿಳೆಯನ್ನು ಸಂಸ್ಕೃತಿಯ ಸಂಕೋಲೆಯಲ್ಲೇ ಇನ್ನೂ ಬಂಧಿಸಲಾಗಿದೆ. ನಮ್ಮಲ್ಲಿ ಮಹಿಳೆಯನ್ನು `ದೇವಿ` ಎಂದು ಒಮ್ಮೆಲೇ ಅತ್ಯುನ್ನತ ಸ್ಥಾನ ಇಲ್ಲವೇ `ದಾಸಿ` ಸ್ಥಾನ ನೀಡಲಾಗಿದೆ. ಆದರೆ, ಮಹಿಳೆಗೆ ಇವೆರೆಡೂ ಸ್ಥಾನ ಬೇಡ. ಅವಳಿಗೆ ಅವಳದೇ ಆದ ಗುರುತಿನ ಆವಶ್ಯಕತೆ ಇದೆ. ಕೆನಡಾದಲ್ಲಿ ಅಕೆ ಪುರುಷ ಕೇಂದ್ರಿತ ವೃತ್ತವನ್ನು ಮುರಿದು ತನ್ನದೇ ಪ್ರತ್ಯೇಕ ಅಸ್ತಿತ್ವ ಕಂಡುಕೊಂಡಿದ್ದಾಳೆ.


...ಹೀಗೆ ಹೇಳುತ್ತಾ, ಈ ವರ್ಷದಲ್ಲಿ `ಭಾರತದ ಮಹಿಳಾ ಆತ್ಮಕಥನಗಳು` ವಿಷಯದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂದಿದ್ದೇನೆ. ಆದರೆ, ಈ ಎಲ್ಲದರ ನಡುವೆ ನಾನು ನನ್ನ ಗಂಡ, ಮಕ್ಕಳು, ವಿದ್ಯಾರ್ಥಿಗಳನ್ನು ತುಂಬಾ ಪ್ರೀತಿಸುತ್ತೇನೆ ಗೊತ್ತಾ? ಎಂದು ಕಣ್ಣುಮಿಟುಕಿಸಿದ ರಂಜನಾ, ಮಾತಿಗೆ ವಿರಾಮ ನೀಡಿದರು.
ಕೃಪೆ : ಪ್ರಜಾವಾಣಿ