ಉತ್ತರಾಯಣದ ಸಂಭ್ರಮದ ನಡುವೆ ತನ್ನ ಜತೆ ಪತ್ನಿ ಹೊಂದಾಣಿಕೆ ಮಾಡಿಕೊಂಡು ಬರಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಮಾಜಿ ಪತಿರಾಯ ಹೆಂಡತಿಯ ತುಟಿಯನ್ನೇ ಕಚ್ಚಿ ತುಂಡರಿಸಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಲ್ಲಿನ ಅಮ್ಡಾವಾಡಿಯಲ್ಲಿ ಭಾನುವಾರ ನಡೆದಿದೆ.
ಪತ್ನಿ ಪುಷ್ಪಾಳ (27) ತುಟಿಯನ್ನು ಕಚ್ಚಿ ತುಂಡರಿಸಿ ಜಟಾಪಟಿ ನಡೆದ ನಂತರ ಆಕೆಯನ್ನು ವಿಎಸ್ ಆಸ್ಪತ್ರೆಗೆ ದಾಖಲಿಸಿ ಪ್ಲ್ಯಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಮಾಜಿ ಗಂಡನ ಸಿಟ್ಟಿಗೆ ಪುಷ್ಪಾಳ ಬಲಕೆನ್ನೆಯ ಸ್ವಲ್ಪ ಭಾಗ ಹಾಗೂ ಕೆಳಗಿನ ತುಟಿ ಹರಿದು ತುಂಡಾಗಿರುವುದಾಗಿ ವರದಿ ವಿವರಿಸಿದೆ.
ಆಕೆಯ ತುಟಿಯ ಕೆಳಭಾಗ ಹಾಗೂ ಬಲಕೆನ್ನೆಯ ಭಾಗದಿಂದ ತುಂಡಾದ ಭಾಗಕ್ಕೆ ಪ್ಲ್ಯಾಸ್ಟಿಕ್ ಸರ್ಜರಿ ಮೂಲಕ ಚಿಕಿತ್ಸೆ ನೀಡುತ್ತಿರುವುದಾಗಿ ಡಾ.ವಿಜಯ್ ಭಾಟಿಯಾ ತಿಳಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಪ್ಲ್ಯಾಸ್ಟಿಕ್ ಸರ್ಜರಿ ಚಿಕಿತ್ಸೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಸುಮಾರು ಎಂಟು ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದ ಪುಷ್ಪಾ. ನಂತರ ಗಂಡು ಮಗುವಿನ ಜನನವಾದ ನಂತರ ವಿಚ್ಛೇದನ ಪಡೆದಿರುವುದಾಗಿ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾಳೆ. ಐದು ತಿಂಗಳ ಹಿಂದಷ್ಟೇ ಆಟೋ ರಿಕ್ಷಾ ಚಾಲಕ ಜೀತು ರಜಪೂತ್ ಎಂಬಾತನ ಪರಿಚಯವಾಗಿದ್ದು, ಆತನನ್ನೇ ಮದುವೆಯಾಗಲು ಪುಷ್ಪಾ ನಿರ್ಧರಿಸಿದ್ದಳು.
ಆದರೆ ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಆಟೋ ರಿಕ್ಷಾ ಚಾಲಕನ ಜತೆ ಪುಷ್ಪಾ ಮದುವೆಯಾದ ಒಂದೇ ತಿಂಗಳಲ್ಲಿ ಆತನ ದುರ್ಬುದ್ಧಿ ತಿಳಿದಿತ್ತು. ಆತ ಕುಡುಕನಾಗಿದ್ದನಲ್ಲದೇ, ಹೆಣ್ಣುಬಾಕ ಕೂಡ ಆಗಿದ್ದ ಎಂದು ತನ್ನ ಅಳಲು ತೋಡಿಕೊಂಡಿದ್ದಾಳೆ. ಆತನಿಗೂ ಹತ್ತು ದಿನಗಳ ಹಿಂದಷ್ಟೇ ವಿಚ್ಛೇದನ ನೀಡಿದ್ದಳು. ಈ ಎಲ್ಲಾ ರಗಳೆಯ ನಂತರ ಪುಷ್ಪಾ ವಾಸ್ನಾದಲ್ಲಿರುವ ತನ್ನ ತವರು ಮನೆಗೆ ಬಂದಿದ್ದಳು.
ಇಷ್ಟೆಲ್ಲಾ ರಂಪಾಟದ ನಂತರ ಉತ್ತರಾಯಣದ ದಿನದಂದು ಮಾಜಿ ಪತಿ ಆಟೋ ಚಾಲಕ ಜೀತೂ ಪುಷ್ಪಾಳನ್ನು ಭೇಟಿಯಾಗಲು ಬಂದಿದ್ದು, ಆಕೆಯ ಹತ್ತಿರ ಮನೆಗೆ ವಾಪಸ್ ಬರುವಂತೆ ಮನವಿ ಮಾಡಿಕೊಂಡಿದ್ದ. ಆಕೆ ಸುತಾರಾಂ ಒಪ್ಪಲಿಲ್ಲ. ನಾ ಈಗಾಗಲೇ ಡೈವೋರ್ಸ್ ಕೊಟ್ಟಾಯಿತು. ಇನ್ನು ನಿನ್ನ ಜತೆ ಬಾಳುವ ಪ್ರಶ್ನೆಯೇ ಇಲ್ಲ ಎಂದು ರೇಗಿದ್ದಳು. ತದನಂತರ ಕುಡಿದು ಬಂದ ಜೀತೂ ಆಕೆಯನ್ನು ಮನೆಯಿಂದ ಹೊರಗೆ ಎಳೆದು ತಂದು ತುಟಿಯನ್ನು ಕಚ್ಚಿ ತುಂಡರಿಸಿ, ಹಿಗ್ಗಾ ಮುಗ್ಗಾ ಥಳಿಸಿದ್ದ ಎಂದು ಆಕೆ ಟೈಮ್ಸ್ ಗೆ ವಿವರಿಸಿದ್ದಾಳೆ.
No comments:
Post a Comment