Sunday, January 22, 2012

ಹುಚ್ಚುಖೋಡಿ ಮನಸು ...... !

ರಾಧಿಕ ರಾವ್, ಮಲ್ಲೇಸರ, ಪ್ರಥಮ ಎಂಎಸ್ಸಿ , ಆಳ್ವಾಸ್ ಕಾಲೇಜ್, ಮೂಡಬಿದ್ರಿ
 ಯುವಾ
ಪ್ರೀತಿ ಎಂದರೇನು...? ತ್ಯಾಗ ...? ಎಂದರ್ಥವೇ...? ಇಲ್ಲಾ ಇವೆಲ್ಲವನ್ನೂ ಮೀರಿದುದೇ... ಒಂದೇ ಒಂದು ಕುಡಿನೋಟಕ್ಕಾಗಿ ಸಾವಿರ ಪ್ರಾರ್ಥನೆ, ಸಾನಿಧ್ಯವೇ ಸ್ವರ್ಗವೆನಿಸುವ, ಹೊಗಳಿ ಹೊಗಳಿಸಿಳ್ಳುವ ತವಕ. ಸಣ್ಣ ಸಣ್ಣ ವಿಚಾರಕ್ಕೂ ಕಣ್ಣೀರ ಕೋಡಿ... ಅವನಿದ್ದರೆ/ ಅವಳಿದ್ದರೆ... ಮತ್ಯಾರೂ ಬೇಡವೆನಿಸುವ ಹುಚ್ಚು ಕಲ್ಪನೆ.


ಇಲ್ಲಿ, ಪ್ರೀತಿಗೆ ಪ್ರೀತಿಯದ್ದೇ ಧ್ಯಾನ, ಪ್ರೀತಿ ಜೊತೆಗಿದ್ದರೆ ಜಗತ್ತನ್ನೇ ಗೆಲ್ಲುವ ಭ್ರಮೆ. ಪ್ರೀತಿಯೇ ಸರ್ವಸ್ವವೆನಿಸುವ, ತಾಯಿ ತಂದೆಯ ಪ್ರೀತಿಯೂ ಕೂಡಾ ಅಸಹನೀಯವೆನಿಸುವ ಸಮಯ.. ಇದೆಲ್ಲಾ ಆಕರ್ಷಣೆ ಇರುವವರೆಗೂ ಮಾತ್ರ... ಆ ಕ್ಷಣಿಕ ಆಕರ್ಷಣೆಯೊಂದಿಗೆ ಬಂದ ಚಿಕ್ಕದೊಂದು ಬೇಜವಾಬ್ದಾರಿಯ ಬೀಜವೊಂದು ಬದುಕಿನೊಳಗೆ ನುಸುಳಿ ಹೆಮ್ಮರವಾಗಿ, ಬದುಕೇ ಗೆದ್ದಲು ಹಿಡಿದಂತಾದಾಗ.. ಆ ಪ್ರೀತಿಯೇ ನಮ್ಮನ್ನು ಅಣಕಿಸುತ್ತದೆ, ಪಾಪಪ್ರಜ್ಞೆ ಕಾಡುತ್ತದೆ...

ಭವಿಷ್ಯದ ಭದ್ರ ಬುನಾದಿಯಾಗ ಬೇಕಾದ ಕಲಿಕೆಯ, ಹರೆಯದ ದಿನಗಳು... ಮುಂದೆ ತಿದ್ದಲಾರದ ನೆನಪುಗಳಾಗುತ್ತವೆ...
ಆದರೆ, ಎಲ್ಲಾ ಹರೆಯದ ಪ್ರೇಮಗಳು ಹೀಗೆ ಎನ್ನುವಂತಿಲ್ಲ. ಅಲ್ಲಿಯೂ ಕೆಲವೊಂದು ನಿಷ್ಕಲ್ಮಷ ಪಕ್ವ ಪ್ರೀತಿ, ಭವಿಷ್ಯದ ಚಿಂತನೆಯಲ್ಲಿ ಹುಟ್ಟಿದ ಸ್ವಚ್ಛಪ್ರೀತಿ ಹುಡುಕಿದರೆ ಸಿಗಬಹುದು.. ಇವರು ಕ್ಷಣಿಕ ಪ್ರೇಮಕ್ಕಾಗಿ, ಸಾನಿಧ್ಯಕ್ಕಾಗಿ ಹಂಬಲಿಸದೇ ಜೀವನದುದ್ದಕ್ಕೂ ನೆಮ್ಮದಿಯ ನೆರಳಾಗುವ ಪ್ರೀತಿಗಾಗಿ ಪರಿತಪಿಸುತ್ತಾರೆ..

ಈ ರೀತಿಯ ಪ್ರೀತಿಯಲ್ಲಿರುವವರು ಪರಸ್ಪರ ಗೌರವದಿಂದ ಆರಾಧನೆಯ ನಿರಂತರ ಬಾಂಧವ್ಯವನ್ನು ಹೊಂದಿರುತ್ತಾರೆ. ಒಂದಿಷ್ಟು ತ್ಯಾಗದೊಂದಿಗೆ ಭವಿಷ್ಯದ ಸಂತಸದ ಕ್ಷಣಗಳ ಹುಡುಕಾಟದ ಹೋರಾಟ ನೆಡೆಸುತ್ತಾರೆ. ಇದೇನು ಸುಲಭಸಾಧ್ಯವಲ್ಲ. ಹುಚ್ಚು ಕೋಡಿ ಮನಸ್ಸನ್ನು ಹಿಡಿಯುವ ಸಂಯಮಬೇಕು, ಜೊತೆಗೆ ವಿವೇಕವಂಬ ಚುಕ್ಕಾಣಿ ಇರಬೇಕು...

ಪ್ರೀತಿಯ ಗುರಿಸಾಧನೆಯ ದಾರಿ ತುಂಬಾ ಕಿರಿದು. ಅಲ್ಲಿ ಹೊಗಲು ಇಬ್ಬರ ಆಸೆ, ಆಕಾಂಕ್ಷೆ ಯೋಚನಾ ಲಹರಿಗಳು ಒಂದಾಗಬೇಕು.
ಕನಸುಗಳ ತೀರದಲ್ಲಿ ಸವೆಯವ ನೆನಪುಗಳೊಂದಿಗೆ ನಡೆದು ಸಾಗುವ ಮನಸಿದ್ದಾಗ ಮಾತ್ರಾ ಭವಿಷ್ಯದ ಬದುಕು ನೆಮ್ಮದಿಯ ಸೆಲೆಯಾಗುತ್ತದೆ..
ಏನಾದರಾಗಲಿ... ವಾಸ್ತವ ಪ್ರಜ್ಞೆಯ ಬುನಾದಿಯಿಲ್ಲದೆ ಭವಿಷ್ಯದ ಗೋಪುರವನ್ನು ಕಟ್ಟುವುದು ಸಾಧ್ಯವಿಲ್ಲವಲ್ಲವೇ...?
'ಪ್ರೀತಿ' ಸಾಧನೆಯ ಸಂಗಾತಿಯಾಗಲಿ...

No comments:

Post a Comment