ಕೆಲವರಿರುತ್ತಾರೆ. ತಮ್ಮ ಇಡೀ ಜೀವನವನ್ನು ಮೂರು ಅಕ್ಷರಗಳ
ಸೆರೆಮನೆಯಲ್ಲಿ ಕಳೆದಿರುತ್ತಾರೆ. ಆ ಸೆರೆಮನೆಯೇ ಒಪ್ಪಿಗೆ! ನಮ್ಮ ಸಮಾಜದಲ್ಲಿ ನಾವು
ಸ್ವಾಭಾವಿಕವಾಗಿ ಸಂತೋಷವಾಗಿರುವ ಪುಟಾಣಿಗಳನ್ನು ಮೆಚ್ಚುಗೆಗಾಗಿ ಚಡಪಡಿಸುವ
ಯಂತ್ರಗಳನ್ನಾಗಿ ಸಾಕುತ್ತೇವೆ. ಇಂತಹ ಮಕ್ಕಳು ದೊಡ್ಡವರಾದ ಮೇಲೆ ಈ ಮೆಚ್ಚುಗೆಯ ಚಪಲ
ವಿಕಾರವಾದ ರೂಪವನ್ನು ತೆಗೆದುಕೊಳ್ಳುತ್ತದೆ.
ರಾಜೇಶನಿಗೆ ಭೂಮಿಯ ಮೇಲಿರುವ ಎಲ್ಲಾ
ವಿಷಯಗಳ ಬಗ್ಗೆ ಒಂದು ಅಭಿಪ್ರಾಯವಿದೆ. ಆದರೆ ಭಿನ್ನಾಭಿಪ್ರಾಯವಿರುವ ಒಬ್ಬ ವ್ಯಕ್ತಿ
ಅವನಿಗೆ ಸಿಗಲಿ! ಥಟ್ಟನೆ ತನ್ನ ಅಭಿಪ್ರಾಯವನ್ನು, ಅವರನ್ನು ಸಮಾಧಾನಗೊಳಿಸುವುದಕ್ಕಾಗಿ,
ಬದಲಿಸುತ್ತಾನೆ. ಅಂದರೆ ರಾಜೇಶನೆಂಬ ವ್ಯಕ್ತಿಯು ಇಲ್ಲವೇ ಇಲ್ಲ. ಇರುವುದು ಅನ್ಯರ
ಕ್ಷಣಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಕನ್ನಡಿ ಮಾತ್ರ! ರಾಜೇಶನು
ಸಂತೋಷವಾಗಿರುವನೆ? ಊಹುಂ. ಭಯ, ನಾಚಿಕೆ ಮತ್ತು ಹೇಡಿತನ ಅವನ ಶಾಶ್ವತ ಸ್ನೇಹಿತರು.
ಸುಮಂತನು
ಯಾವ ಕೆಲಸವನ್ನೂ ಅದರಿಂದ ಸಿಗುವ ಸಂತೋಷಕ್ಕಾಗಿ ಮಾಡುವುದಿಲ್ಲ. ಒಂದು ಕೆಲಸದಿಂದ ತನಗೆ
ಪರರಿಂದ ಎಷ್ಟು ಒಪ್ಪಿಗೆ ಅಂಕಗಳು ಸಿಗುತ್ತವೆ ಎಂದು ಲೆಕ್ಕ ಹಾಕಿಕೊಂಡು
ಕೆಲಸಕ್ಕಿಳಿಯುತ್ತಾನೆ. ವೈಯಕ್ತಿಕ ಜೀವನದಲ್ಲಂತೂ ಸುಮಂತನು ಮೆಚ್ಚುಗೆ ಚಟದ ಅರಸ.
ತಂದೆ-ತಾಯಿಗೆ ಅವನು ಶರಣಪುತ್ರ, ಗೆಳತಿಗೆ ಶ್ರೀರಾಮಚಂದ್ರ, ಮತ್ತು ಬಂಧುಗಳಿಗೆ
ಧರ್ಮರಾಜ! ಇವುಗಳು ನಟನಾ ಭಯಂಕರ ಸುಮಂತನು ಒಪ್ಪಿಗೆಗಾಗಿ ನಿರ್ವಹಿಸುವ ಪಾತ್ರಗಳೇ
ಹೊರತು, ಹೃದಯಪೂರ್ವಕ ಸಂಬಂಧಗಳಲ್ಲ. ಸುಮಂತನಿಗೆ ಮನಸ್ಸಿನಲ್ಲಿ ಅಶಾಂತಿ ಮತ್ತು
ಮೆಚ್ಚುಗೆ ಸಿಗದಿದ್ದಾಗ ಅಗಾಧವಾದ ಹತಾಶೆ ಅನುಭವಿಸುತ್ತಾನೆ.
ಸ್ನೇಹಿತರೇ, ನೀವೂ ಕೂಡ ಒಪ್ಪಿಗೆ ಎಂಬ ಕೆಟ್ಟ ಚಟಕ್ಕೆ ಬಲಿಯಾಗಿದ್ದೀರಾ? ಹಾಗಾದರೆ ಎಚ್ಚೆತ್ತುಕೊಳ್ಳಿ. ಈ ಕೆಳಗಿನ ತಂತ್ರಗಳು ನಿಮ್ಮನ್ನು ಮಂಜೂರಾತಿಯ ಚಕ್ರವ್ಯೂಹದಿಂದ ಹೊರಬರುವ ವಿಧಾನವನ್ನು ತೋರುತ್ತವೆ:
* ಮೊದಲನೆಯದಾಗಿ, ಕೂತಲ್ಲಿ ನಿಂತಲ್ಲಿ
ಕ್ಷಮಾಪಣೆ ಕೇಳುವುದನ್ನು ಬಿಟ್ಟು ಬಿಡಿ. ಅತಿಯಾದ ಕ್ಷಮೆಯಾಚಿಸುವಿಕೆ ಒಪ್ಪಿಗೆ ಚಟದ
ನೀಚಾವತಾರ. ಕೆಲವು ಸಂದರ್ಭಗಳಲ್ಲಿ ನಿಮ್ಮ ವರ್ತನೆ ನಿಮಗೇ ಹಿಡಿಸದಿರಬಹುದು. ಆಗ, "ನನ್ನ
ನಡವಳಿಕೆ ಸರಿಯಾಗಿರಲಿಲ್ಲ. ನನ್ನ ವರ್ತನೆಯನ್ನು ನಾನು ಸರಿಪಡಿಸುತ್ತೇನೆ" ಎಂದು
ಘೋಷಿಸಿ, ಆ ದಿಕ್ಕಿನಲ್ಲಿ ಕ್ರಮ ತೆಗೆದುಕೊಳ್ಳಿ.
* ಮುಂದಿನ ಬಾರಿ ಯಾರಾದರು
ನಿಮ್ಮನ್ನು ವೈಯಕ್ತಿಕವಾಗಿ ನಿಂದಿಸಿದಲ್ಲಿ, "ಏನೊಲೈ.... ", ಎಂದು ಪಂಚೆ ಕಟ್ಟಿಕೊಂಡು
ಜಗಳಕ್ಕಿಳಿಯುವ ಮುನ್ನ, ಏನೂ ಹೇಳದೆ ಸುಮ್ಮನ್ನಿರುವುದನ್ನು ಪ್ರಯತ್ನಿಸಿ ನೋಡಿ.
ನಿಂದನೆಯ ಸಮ್ಮುಖದಲ್ಲಿ ನೀವು ವಾಗ್ಯುದ್ಧಕ್ಕೆ ಇಳಿದರೆ, ನೀವು ನಿಮ್ಮ ಅಭಿಪ್ರಾಯಕ್ಕಿಂತ
ಅನ್ಯರ ಅನಿಸಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಿತ್ತೀರಿ ಎಂದರ್ಥ.
* ಕೆಲವು
ಕುಟುಂಬ ಸದಸ್ಯರು ಶುಭಕಾರ್ಯಗಳಿಗೆ ಬರುವವರ "ಅಟೆಂಡೆನ್ಸ್" ಹಾಕುವುದರಲ್ಲಿ ನಿಸ್ಸೀಮರು.
ನೀವು ಹೋಗದಿದ್ದರೆ, ನಿಮ್ಮ ಆಯ್ಕೆ-ಸಂದರ್ಭಗಳನ್ನು ಲೆಕ್ಕಿಸದೆ, ಕೊಂಕಾಗಿ
ಮಾತಾಡುತ್ತಾರೆ. ಇಂತಹ ಜನರ ಸಂಬಂಧ ನಿಮಗೆ ನಿಜವಾಗಿಯೂ ಬೇಕಾ? ಯೋಚಿಸಿ.
* ಉಡುಪು
ಅಥವಾ ಇತರ ಖಾಸಗಿ ವಸ್ತುಗಳನ್ನು ಖರೀದಿಸುವ ಮುನ್ನ ಸರ್ವಾಧಿಕಾರಿಗಳನ್ನು ಕೇಳಬೇಡಿ.
ನಿಮ್ಮ ಆಯ್ಕೆಯ ವಸ್ತುವನ್ನು ಜಯ್ ಎಂದು ಬುಟ್ಟಿಗೆ ಹಾಕಿಕೊಳ್ಳಿ. ಆರ್ಥಿಕ ಅವಲಂಬನದಿಂದ
ನೀವು ಇದನ್ನು ಮಾಡಲಾಗದಿದ್ದರೆ, ನಿಮಗೆ ಇಷ್ಟವಾದ ಒಂದು ಸೃಜನಾತ್ಮಕ ವೃತ್ತಿಯ ಮೂಲಕ ಹಣ
ಸಂಪಾದನೆ ಪ್ರಾರಂಭಿಸಿ. ಇದಲ್ಲದೆ, ಯೋಚಿಸೋಕೆ, ಮಾತನಾಡೋಕೆ, ಕುಳಿತುಕೊಳ್ಳೋಕೆಲ್ಲಾ
ಅನುಮತಿ ಕೇಳಬೇಡಿ. ಮಾನವೀಯ ಹಕ್ಕುಗಳನ್ನು ತ್ಯಜಿಸಿದ ಗುಲಾಮರು ಮಾತ್ರ ಹಣಕ್ಕೆ ಮತ್ತು
ಅನುಮತಿಗೆ ಬೇಡಬೇಕು.
* ಮುಂದಿನ ಬಾರಿ ಒಂದು ಸಂವಾದದಲ್ಲಿ ನೀವು ಎಷ್ಟು ಬಾರಿ
ಬಡಾಯಿ ಕೊಚ್ಚಿಕೊಳ್ಳುತ್ತೀರಿ ಎಂಬುದನ್ನು ಪರಿಶೀಲಿಸಿ. ಹೆಮ್ಮೆಯಾಗುವ ನಿಮ್ಮ ಒಂದು
ಸಾಧನೆಯ ಅನುಭವವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕೆಂದರೆ, ಖಂಡಿತ ಅದನ್ನು
ಹಂಚಿಕೊಳ್ಳಿ. ಆದರೆ, ಒಮ್ಮೊಮ್ಮೆ ನಿಮ್ಮ ಸಾಧನೆಯನ್ನು ಬೇರೆಯವರು ಹೊಗಳಬೇಕೆಂಬ ಕೆಟ್ಟ
ಚಡಪಡಿಕೆ ಮೈಮೇಲೆ ಬಂದುಬಿಡುತ್ತದೆ. ಇಂತಹ ಸಂದರ್ಭದಲ್ಲಿ, ನೀವು ಅನಿವಾರ್ಯವಾಗಿ
ಕೊಚ್ಚಿಕೊಳ್ಳಲೇಬೇಕಾದ ವಿಷಯವನ್ನು ಅರ್ಧ ಗಂಟೆ ಯಾರಿಗೂ ಹೇಳಬೇಡಿ. ದೇಹದ ಬಡಾಯಿಯ ಅಬ್ಬರ
ಸಾಮಾನ್ಯವಾಗಿ ಸ್ವಲ್ಪ ಸಮಯದ ನಂತರ ಕ್ಷೀಣಿಸುತ್ತದೆ.
* "ವಿಶ್ವದಲ್ಲಿರುವ
ಎಲ್ಲಾ ಜೀವಿಗಳೂ ನನ್ನನ್ನು ಅರ್ಥ ಮಾಡಿಕೊಳ್ಳಬೇಕು!" ಎಂಬ ಹಾಸ್ಯಾಸ್ಪದ ಆಸೆಗೆ ಇಂದೇ
ವಿದಾಯ ಹೇಳಿ ಹೊರಗೋಡಿಸಿ. ಒಂದು ಸರಳ ಸತ್ಯವೆಂದರೆ ಅನೇಕ ಜನರು ನಿಮ್ಮ ಭಾವನೆ, ವರ್ತನೆ,
ಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರತ್ಯೇಕ ಅಸ್ತಿತ್ವವನ್ನು ಅನುಭವಿಸುವ
ಮಾನವ ಜಾತಿಯಲ್ಲಿ ಇದು ಸಹಜ. ಈ ಸತ್ಯವನ್ನು ನೀವು ಎಷ್ಟು ಬೇಗ ಅರ್ಥ ಮಾಡಿಕೊಳ್ಳುವಿರೋ,
ಅಷ್ಟು ಪ್ರಮಾಣದ ನೆಮ್ಮದಿ ನಿಮ್ಮದಾಗುವುದು.
ಹೀಗೆಲ್ಲಾ ಅಂದ ಮಾತ್ರಕ್ಕೆ
ನಿಮ್ಮೆಡೆಗೆ ಬರುವ ಮೆಚ್ಚುಗೆಯನ್ನು ನೀವು ತಿರಸ್ಕರಿಸಬೇಕು ಎಂದರ್ಥವಲ್ಲ. ಹಿತೈಷಿಗಳ
ಪ್ರಶಂಸೆಗೆ ನೀವು ಒಳಗಾದಾಗ ಒಂದು ಪುಟ್ಟ ಧನ್ಯವಾದದ ಮೂಲಕ ಅವರ ಪ್ರೀತಿಯ ಮಾತುಗಳನ್ನೂ
ಸ್ವೀಕರಿಸಿ. ಸಂತೋಷ ಪಡಿ. ಒಪ್ಪಿಗೆ ಮತ್ತು ಮೆಚ್ಚುಗೆ ಜೀವನದ ಸಿಹಿತಿಂಡಿಗಳು
ಎಂಬುದನ್ನು ಇಲ್ಲಿ ನಿರಾಕರಿಸಲಾಗಿಲ್ಲ. ಆದರೆ, ಇವುಗಳು ನಿಮ್ಮ ಜೀವನದ ಸ್ತಂಭಗಳಾಗಿ
ಬಿಟ್ಟರೆ, ನಿಮ್ಮ ಆತ್ಮಶಕ್ತಿ ಬಹುಬೇಗ ಕುಸಿದು ಬೀಳುತ್ತದೆ. ಆತ್ಮವಿಶ್ವಾಸಿಗಳಾದ ನೀವು
ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ, ಅಲ್ಲವೇ?
ಕೃಪೆ : ಒನ್ ಇಂಡಿಯಾ