Friday, October 19, 2012

ನಿನ್ನ ಸೋದರಮಾವ ಅತ್ತೆಗೆ ಹಾಯ್ ಹೇಳಿದ್ಯಾ ?

ಎಮ್ಎನ್ಸಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದ ಸುಬ್ಬಿಗೆ ಭರ್ತಿ ಕೆಲಸ. ಪ್ರತಿದಿನ ಮನೆಗೆ ಬರುವುದು ಲೇಟಾಗತ್ತೆ ಎಂದು ತನ್ನ ಗಂಡ ಸುಬ್ಬುವಿಗೆ ಮೊದಲೇ ಹೇಳಿದ್ದಳು. ಸುಬ್ಬು ಕೂಡ, ಆಗ್ಲಿ ಕಣೆ ವರಿ ಮಾಡ್ಕೋಬೇಡ ಎಂದು ಮುದ್ದಿಸಿ ಕಳಿಸಿರುತ್ತಾನೆ.

ಪ್ರತಿರಾತ್ರಿ ಹನ್ನೆರಡು ಗಂಟೆಗೆ ಬರೋಳು ಒಂದು ದಿನ ಹನ್ನೊಂದು ಗಂಟೆಗೇ ಬಂದುಬಿಡುತ್ತಾಳೆ. ಬೇಗನೆ ಬಂದಿದ್ದಕ್ಕೆ ಗಂಡ ಖುಷಿಪಡಬಹುದು ಎಂದು ಅಂದುಕೊಂಡಿದ್ದ ಸುಬ್ಬಿ, ಗಂಡನಿಗೆ ಗೊತ್ತಾಗಬಾರದು, ಸರ್ಪ್ರೈಸ್ ಕೊಡಬೇಕು ಎಂದುಕೊಂಡು ತಾನೇ ಬಾಗಿಲು ತೆಗೆದು ಮನೆಯೊಳಗೆ ಬರುತ್ತಾಳೆ.

ಇನ್ನೇನು ಬೆಡ್ರೂಮೊಳಗೆ ಕಾಲಿಡಬೇಕು ಅಷ್ಟರಲ್ಲಿ ಹಾಸಿಗೆಯ ಮೇಲೆ ಮುಲುಕಾಟ ಕೇಳುತ್ತದೆ. ಹೊದ್ದುಕೊಂಡಿದ್ದ ಬೆಡ್ಶೀಟ್ನೊಳಗಿನ ಒಂದು ತುದಿಯಲ್ಲಿ ನಾಲ್ಕು ಕಾಲುಗಳು ಹೊರಬಂದಿರುತ್ತವೆ. ತ್ರೀ ಪಿನ್ ಎಲೆಕ್ಟ್ರಿಕ್ ಸಾಕೆಟ್ ಒಳಗೆ ಬೆರಳು ತೂರಿಸಿ ಕರೆಂಟ್ ಹೊಡೆಸಿಕೊಂಡಂತೆ ಆಕೆಗೆ ಭಾಸವಾಗುತ್ತದೆ.

ತಾನು ಮೋಸಹೋದೆ ಎಂದು ಮುಖ ಕೆಂಪೇರಿಸಿಕೊಂಡು, ಮೂಗಿನ ಹೊಳ್ಳೆಗಳನ್ನು ಅರಳಿಸಿಕೊಂಡು, ಹಾಸಿಗೆಯ ಮೇಲೆ ಮಲಗಿದ್ದವರಿಗೆ ಒಂದು ಕ್ಷಣವೂ ಅವಕಾಶ ಸಿಗದಂತೆ, ಮಲಗಿದವರು ಕಮಕ್ ಕಿಮಕ್ ಅನ್ನದಂತೆ, ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ರಪರಪ ಅಂತ ಬಾರಿಸಿಬಿಡುತ್ತಾಳೆ. ಕೆಲ ನಿಮಿಷಗಳಲ್ಲಿ ಎಲ್ಲವೂ ಶಾಂತ.

ಸಿಕ್ಕಾಪಟ್ಟೆ ಹೆದರಿಕೊಂಡ ಸುಬ್ಬಿ ಕಿತ್ತುಕೊಂಡು ಬಂದಿದ್ದ ಬೆವರನ್ನು ಒರೆಸಿಕೊಂಡು, ಏನು ಮಾಡಬೇಕೆಂದು ತಿಳಿಯದೆ ನೀರು ಕುಡಿಯಲೆಂದು ಅಡುಗೆಮನೆಗೆ ಬರುತ್ತಾಳೆ. ಗ್ಲಾಸಿಗೆ ನೀರು ಬಿಟ್ಟು ಇನ್ನೇನು ಗಂಟಲಿಗೆ ಇಳಿಬಿಡಬೇಕು, ಅಷ್ಟರಲ್ಲಿ ಕಟ್ಟೆಯ ಮೇಲೆ ಕುಳಿತು ಹಸಿಹಸಿ ಕ್ಯಾರೆಟ್ ತಿನ್ನುತ್ತಿದ್ದ ಸುಬ್ಬು ಕಾಣಿಸುತ್ತಾನೆ. ಸುಬ್ಬಿ ಕೈಯಲ್ಲಿದ್ದ ನೀರಿನ ಗ್ಲಾಸ್ ಫಳ್ಳನೆ ಬಿದ್ದುಹೋಗುತ್ತದೆ.

ಸುಬ್ಬು, "ಏನ್ ಚಿನ್ನಾ, ಯಾಕೆ ಏನಾಯ್ತು? ಯಾವಾಗ ಬಂದಿ? ಅಂದ ಹಾಗೆ, ಈಗಷ್ಟೆ 9 ಗಂಟೆಗೆ ನಿನ್ನ ಸೋದರಮಾವ, ಅತ್ತೆ ಬಂದಿದ್ದಾರೆ. ಅಲ್ಲಿ ಇಲ್ಲಿ ಯಾಕೆ ಮಲಗಲು ಬಿಡಬೇಕೆಂದು ಅವರಿಗೆ ನಮ್ಮ ಬೆಡ್ರೂಮ್ ಬಿಟ್ಟುಕೊಟ್ಟೆ. ಇನ್ನೂ ಮಲಗಿಲ್ಲ ಅಂತ ಕಾಣತ್ತೆ. ಅವರಿಗೆ ಹಾಯ್ ಎಂದು ಹೇಳಿದ್ಯಾ?"

ಕೃಪೆ : ಒನ್ ಇಂಡಿಯಾ

Wednesday, October 3, 2012

ರಸಿಕ ಗಂಡನನ್ನು ಬಾಲ್ಕನಿಯಿಂದ ತಳ್ಳಿದ ಹೆಂಡತಿ !

ಸಿನೆಮಾದಲ್ಲಿ ಕೂಡ ಯಾವ ಕಥೆಗಾರನ ನಿರ್ದೇಶಕನ ಕಲ್ಪನೆಗೆ ನಿಲುಕಲಾಗದ ಘಟನೆಯೊಂದು ಅರುಣಾಚಲ ರಾಜ್ಯದ ಶೇಷಾಚಲ ಜಿಲ್ಲೆಯ ಚಂಚಲ ಗ್ರಾಮದಲ್ಲಿ ನಡೆದಿತ್ತು. ನಿರುಮ್ಮಳವಾಗಿದ್ದ ಆ ಅಮವಾಸ್ಯೆಯ ರಾತ್ರಿಯಂದು ಜರುಗಿದ್ದೇನೆಂದರೆ, ಅರುಳು ಮರುಳು ಸ್ಥಿತಿಯನ್ನು ದಾಟಿದ್ದ 99ರ ಹಲ್ಲುದುರಿದ ಮುದುಕನೊಬ್ಬ 22ರ ಹರೆಯದ ಯುವತಿಯೊಂದಿಗೆ ಹಾಸಿಗೆಯಲ್ಲಿ ಚೆಲ್ಲಾಟವಾಡುತ್ತಿದ್ದ ಸ್ಥಿತಿಯಲ್ಲಿ 87ರ ತನ್ನ ಹೆಂಡತಿಗೆ ರೆಡ್ ಹ್ಯಾಂಡಾಗಿ ಸಿಕ್ಕುಬಿದ್ದಿದ್ದ.


ನಖಶಿಖಾಂತ ಉರಿದುಹೋದ ಮುದುಕಿ, ಸಂಪೂರ್ಣ ವಿವಸ್ತ್ರಳಾಗಿದ್ದ ಆ ಸುಂದರ ಯುವತಿಯನ್ನು ಒದ್ದೋಡಿಸಿ, ದಾಂಪತ್ಯಕ್ಕೆ ಮಸಿಬಳಿದ ತನಗೆ ಮೋಸ ಮಾಡಿದ ಗಂಡನನ್ನು ದರದರ ಎಳೆದುಕೊಂಡು ಹೋಗಿ ಬಾಲ್ಕನಿಯ ಮೇಲಿಂದ ಮುಲಾಜಿಲ್ಲದೆ ತಳ್ಳಿಬಿಟ್ಟಿದ್ದಳು. ತೀವ್ರ ಆಘಾತಕ್ಕೆ ಒಳಗಾದ ರಸಿಕ ಅಜ್ಜ ಸ್ಥಳದಲ್ಲಿಯೇ ಸತ್ತುಹೋದ. ನಂತರ ತಾನೇ ಬಂದು ಪೊಲೀಸರೆದಿರು ಮುದುಕಿ ಶರಣಾಗತಳಾದಳು.

ಅವಳ ಮೇಲೆ ಗಂಡನನ್ನು ಕೊಲೆಗೈದ ಕೇಸನ್ನು ದಾಖಲಿಸಲಾಯಿತು. ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರಿಂದ ಆಕೆಯನ್ನು ನ್ಯಾಯಾಧೀಶರ ಮುಂದೆ ಮುಂದಿನ ವಿಚಾರಣೆ ಮತ್ತು ಪ್ರಕ್ರಿಯೆಗಾಗಿ ಕರೆತರಲಾಯಿತು.

ನ್ಯಾಯಾಧೀಶ : ಅಮ್ಮ. ನಿಮ್ಮ ಸ್ಥಿತಿ ನೋಡಿದರೆ ನಿಜಕ್ಕೂ ಬೇಜಾರಾಗುತ್ತದೆ. ನೀವು ತಪ್ಪನ್ನು ಒಪ್ಪಿಕೊಂಡಿದ್ದೀರಿ. ನಿಮ್ಮ ಗಂಡ ಆ ವಯಸ್ಸಲ್ಲಿ ತಪ್ಪೇ ಮಾಡಿರಬಹುದು. ಆದರೆ, ಅಂಥ ವಯಸ್ಸಾದ ವ್ಯಕ್ತಿಯನ್ನು ಬಾಲ್ಕನಿಯಿಂದ ತಳ್ಳುವಂಥ ಕೆಲಸ ಏಕೆ ಮಾಡಿದಿರಿ?

ಮುದುಕಿ : ನ್ಯಾಯಾಧೀಶರೆ, 99ರ ಹರೆಯದಲ್ಲಿ ನನ್ನ ಗಂಡ ಏನು ಬೇಕಾದರೂ ಮಾಡಬಹುದಾದರೆ, ಆತನಿಗೆ ಬಾಲ್ಕನಿ ಮೇಲಿಂದ ಹಾರಲು ಏಕೆ ಸಾಧ್ಯವಿಲ್ಲ ಎಂದು ಅಂದುಕೊಂಡು ಬಾಲ್ಕನಿಯಿಂದ ತಳ್ಳಿಬಿಟ್ಟೆ!
ಕೃಪೆ : ಒನ್ ಇಂಡಿಯಾ