Sunday, December 16, 2012

ಮನಸ್ಸು ದುರ್ಬಲವಾಗುವುದೇಕೆ?



ಮನಸ್ಸಿದ್ದಲ್ಲಿ ಮಾರ್ಗ, ಕನಸಿದ್ದಲ್ಲಿ ಸಾಧನೆ  ಎಂಬ ಹಿತೋಕ್ತಿಯಾಗಲಿ,  ಮನಸ್ಸು ಮಾಡಿದ್ರೆ ಯಾಕಾಗಲ್ಲ? ಎಂತೆಂಥವರು ಏನೆಲ್ಲ ಮಾಡುತ್ತಾರೆ. ನಾವ್ಯಾಕೆ ಮಾಡಬಾರ‌್ದು  ಎಂಬ ಸದೃಢ ಮನಸ್ಸಿನ ನುಡಿಗಳನ್ನಾಗಲಿ ಜೀವನದಲ್ಲಿ ಒಂದು ಸಲವಾದರೂ ಕೇಳಿದ್ದೇವೆಯಲ್ಲವೇ?

ಕಂಕಣಬದ್ಧರಾಗಿ ಕೆಲವೊಮ್ಮೆ ಸಾಧನೆ ಮಾಡಿ ತೋರಿಸಿದ್ದೇವೆ. ಗಾಯದ ಮೇಲೆ ಬರೆ ಎಳೆದಂತೆ, ಕಷ್ಟಗಳ ಮೇಲೆ ಕಷ್ಟಗಳು ಎರಗಿ ಏನೂ ತೋಚದಂತಾಗಿ, ಇನ್ನು ಬದುಕೇ ಸಾಕು ಎನ್ನುವಷ್ಟರ ಮಟ್ಟಿಗೆ ಬಸವಳಿದಿದ್ದೇವೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ಚಡಪಡಿಸಿದ್ದೇವೆ.


ಆದರೇನಂತೆ ಡಿ.ವಿ.ಗುಂಡಪ್ಪ ಅವರು ಹೇಳಿದಂತೆ  `ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬಾ`  ಎನ್ನುವಂತೆ ಬದುಕು ಸಾಗಿಸುತ್ತಿದ್ದೇವೆ. ನಮ್ಮ ನಿತ್ಯ ಜೀವನದಲ್ಲಿ ಕೆಲವು ವಿಷಯಗಳು ನಮಗೆ ಕ್ಷುಲ್ಲಕ ಎನಿಸಿದರೂ ದುರ್ಬಲ ಮನಸ್ಸಿನವರನ್ನು ಹೇಳ-ಹೆಸರಿಲ್ಲದಂತೆ ಮಾಡುತ್ತವೆ ಎನ್ನಲು ಮುಂಬೈನಲ್ಲಿ ನಡೆದ ಎರಡು ಘಟನೆಗಳು ಸಾಕ್ಷಿ.


ಘಟನೆ 1:
ಪಿಯುಸಿ ಹುಡುಗನೊಬ್ಬ ಟಿವಿಯ ರಿಮೋಟ್ ಕೊಡೆಂದು ಆಗತಾನೆ ಟಿವಿ ನೋಡಲಾರಂಭಿಸಿದ ತಂಗಿಯನ್ನು ಕಾಡಿದ. ಆಕೆ ಕೊಡಲಾರೆನೆಂದು ಹಠ ಹಿಡಿದಾಗ ಸಿಟ್ಟಿನಿಂದ ಅವಳ ಕಪಾಳಕ್ಕೆ ಹೊಡೆದ. ಅದೇ ಕೋಪ ಹತಾಶೆಯಲ್ಲಿ ಕೋಣೆಯೊಳಗೆ ಬಾಗಿಲು ಹಾಕಿ ಫ್ಯಾನ್‌ಗೆ ನೇಣು ಹಾಕಿಕೊಂಡ.

ಘಟನೆ 2:
ಎಂಟನೇ ತರಗತಿ ಬಾಲೆಯೊಬ್ಬಳು ಕಳೆದ ಮಳೆಗಾಲದ ಆರಂಭದಲ್ಲಿ ಮುಂಬೈನಲ್ಲಿ ಮೊದಲ ಮಳೆಯ ಸಿಂಚನವಾದಾಗ ಆಟವಾಡಲು ಉತ್ಸುಕಳಾಗಿದ್ದಳು. ಹೆತ್ತವರು ಮನೆಯಲ್ಲಿರಲಿಲ್ಲ. ಹೊರಹೋಗದಂತೆ ಆಕೆಯ ಅಣ್ಣ ತಾಕೀತು ಮಾಡಿಬಿಟ್ಟ. ಹತಾಶೆಗೊಂಡ ಹುಡುಗಿ ತನ್ನ ದುಪ್ಪಟ್ಟದಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದಳು.

ಇಂತಹ ಚಿಕ್ಕ ಪುಟ್ಟ ವಿಷಯಗಳಿಗಾಗಿ ಅನಾಹುತಗಳಾದ ಘಟನೆ ಹೆಕ್ಕಿದರೆ ಲೆಕ್ಕವಿಲ್ಲದಷ್ಟು ಸಿಗುತ್ತವೆ. ಇಂಥ ಅನಾಹುತಗಳಿಗೆ ಮುಖ್ಯ ಕಾರಣವೇ ದುರ್ಬಲ ಮನಸ್ಸು.


ಮನಸ್ಸು ದುರ್ಬಲವಾಗುವ ಸಂದರ್ಭಗಳು

*
 ಅತ್ಯಂತ ಪ್ರೀತಿಯ ವಸ್ತು ಕಳೆದುಹೋದಾಗ
*
ನಮ್ಮ ನಾಲಿಗೆಯನ್ನು ನಾವೇ ಹರಿಯಬಿಟ್ಟಾಗ
*
ನಮ್ಮನ್ನು ಪ್ರೀತಿಸುವವರು ಬೇರೊಬ್ಬರನ್ನು ಪ್ರೀತಿಸಲಾರಂಭಿಸಿದಾಗ
*
ಸಹಿಸಿಕೊಳ್ಳಲಾರದಂತಹ ಅವಮಾನವಾದಾಗ
*
ಪ್ರೀತಿಪಾತ್ರರಾದವರನ್ನು ಕಳೆದುಕೊಂಡಾಗ
*
ಮಾನಸಿಕ ಯಾತನೆ, ಕಿರುಕುಳವಾದಾಗ
*
ಯಾರಾದರೂ ನಮ್ಮ ಸ್ವತಂತ್ರಕ್ಕೆ ಅಡ್ಡಿಪಡಿಸಿದಾಗ
*
ದೇಹಕ್ಕೆ (ರೋಗಗಳಿಂದ) ತೊಂದರೆಯಾದಾಗ
*
ಕಲಿಯಬೇಕಾದದ್ದನ್ನು ಬೇಗನೆ ಕಲಿಯಲಾಗದಿದ್ದಾಗ
*
ಸಾಧನೆಯ ಹಾದಿಯಲ್ಲಿ ಯಶ ಕಾಣದಿದ್ದಾಗ
*
ಪ್ರೀತಿಸುವ ವ್ಯಕ್ತಿ ಕೈಕೊಟ್ಟಾಗ
*
ಜನರು ಅನುಕಂಪ ತೋರ್ಪಡಿಸಿದಾಗ
*
  ಭಯವಾದಾಗ, ಜಗಳವಾದಾಗ
*
ಮೌನದಲ್ಲಿಯೇ ಚುಚ್ಚು ಮಾತುಗಳಿಂದ ನೋಯಿಸಿದಾಗ
*
  ನಾವು ಮಾಡಿದ ತಪ್ಪಿನ ಅರಿವು ನಮಗುಂಟಾದಾಗ
ಇಂಥ ನಾನಾ ಸಂದರ್ಭಗಳಲ್ಲಿ ಮನಸ್ಸು ದುರ್ಬಲವಾಗುವುದಿದೆ.

ದುರ್ಬಲ ಮನಸ್ಸನ್ನು ಗುರುತಿಸುವುದೊಂದು ಕೌಶಲ

ನಾನಾ ಘಟನೆಗಳ ಹೊಡೆತಕ್ಕೆ ಸಿಲುಕಿಕೊಂಡ ಮನಸ್ಸು ದುರ್ಬಲಗೊಳ್ಳುತ್ತಿದ್ದಂತೆ ಚಂಚಲತೆ ಹೆಚ್ಚಾಗುತ್ತದೆ. ಏನೂ ತೋಚದಂತಾಗುತ್ತದೆ. ಈಗ  ನಾನು ಏನು ಮಾಡಲಿ  ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ.  ನಕಾರಾತ್ಮಕ(ನೆಗೆಟಿವ್) ಭಾವನೆಗಳು ಜಾಗೃತವಾಗುತ್ತವೆ. ಅಂಜಿಕೆ, ಅಧೈರ್ಯ, ದುರ್ಬಲತೆ, ಏಕಾಂಗಿತನಗಳು ಮಿತ್ರರಾಗಲು ಬಯಸುತ್ತವೆ.

ಧೈರ್ಯ, ನಂಬಿಕೆ, ವಿಶ್ವಾಸಗಳು ಹಿತಶತ್ರುಗಳಾಗಿ ಪರಿಣಮಿಸುತ್ತವೆ. ನಾನಾ ಮಾರ್ಗಗಳು, ನಾನಾ ತೀರ್ಮಾನಗಳು ಮನದಲ್ಲಿ ಕೋಲಾಹಲವೆಬ್ಬಿಸಿ ಒಮ್ಮೆಲೇ ಬಂದೆರಗುವುದರಿಂದ ಉತ್ತರ ಕಂಡುಕೊಳ್ಳಲು ವಿಫಲರಾಗುತ್ತೇವೆ. ಈ ಭೂಮಿ ಮೇಲೆ ಇನ್ನು ಬದುಕು ಸಾಕು ಎಂಬ ಆತುರದ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಂತಹ ನಿರ್ಧಾರಗಳಿಗೆ ಕಾರಣವೇ ದುರ್ಬಲ ಮನಸ್ಸು.


ಬೇಕು ಎಚ್ಚರ!

ಸಮಸ್ಯೆಗಳಿಂದ ಮನಸ್ಸು ದುರ್ಬಲವಾಯಿತು. ದುರ್ಬಲಗೊಂಡ ಮನಸ್ಸಿನಲ್ಲಿ ಯಾವ ಬದಲಾವಣೆಗಳಾಗುತ್ತವೆ ಎಂಬುದನ್ನು ಗುರುತಿಸಿಯಾಯಿತು ಎಂದ ಮೇಲೆ, ನಮ್ಮ ಮುಂದಿನ ಗುರುತರ ಜವಾಬ್ದಾರಿ ಮಂಗನ ಕೈಗೆ ಮಾಣಿಕ್ಯ ಕೊಡದಿರುವುದು ಅಂದರೆ ದುರ್ಬಲ ಮನಸ್ಸಿಗೆ ಶರಣಾಗದಿರುವುದು.

ವರ್ತನೆ ಪರಿವರ್ತನೆಗೊಳಿಸಿ

*
ಮನಸ್ಸು ದುರ್ಬಲಗೊಂಡಾಗ ಏಕಾಂಗಿತನ ಒಳ್ಳೆಯದಲ್ಲ. ಬೇಗನೆ ಜನರ ಗುಂಪಿನೊಳಗೊಬ್ಬರಾಗಲು ಪ್ರಯತ್ನಿಸಬೇಕು.
*
ಮನಸ್ಸು ದುರ್ಬಲವಾದ ಸ್ಥಳವನ್ನು ಜಾಣ್ಮೆಯಿಂದ ತ್ಯಜಿಸಬೇಕು.
*
ಗೆಳೆಯ/ತಿಯರನ್ನು ಕರೆದುಕೊಂಡು ಸಿನಿಮಾ ಅಥವಾ ಇತರೆ ಮನರಂಜನೆ ಕಾರ್ಯಕ್ರಮ ನೋಡಲು ಹೋಗಬೇಕು.
*
ಮನಸ್ಸನ್ನು ಕಾರ್ಯಗಳತ್ತ ಹರಿಸಿ. (ಗಿಡಗಳಿಗೆ ನೀರು ಹಾಯಿಸಿ. ಪೇಪರ್ ಕಟಿಂಗ್ ಮಾಡಿ)
*
ಕೈಯನ್ನು ಹಣೆಗೋ, ಗದ್ದಕ್ಕೋ ಹಚ್ಚಿಕೊಂಡು ಕೂರಬಾರದು.
*
ಲೊಚಗುಟ್ಟುವುದನ್ನು ನಿಲ್ಲಿಸಿ. ಮೂಗಿನಿಂದ ದೀರ್ಘ ಉಸಿರೆಳೆದುಕೊಂಡು ಬಾಯಿಂಧ ಬಿಡುವುದು ಉತ್ತಮ.
*
ಒಂದೆಡೆ ಹೋಗಿ, ಕೈಯ ಬೆರಳುಗಳು ಒಂದಕ್ಕೊಂದು ಕೂಡುವಂತೆ ಜೋರಾಗಿ ಚಪ್ಪಾಳೆ ತಟ್ಟುತ್ತಾ, ನರಮಂಡಲಗಳನ್ನು ಎಚ್ಚರಗೊಳಿಸುವುದು.
*
ಆದ ಕಷ್ಟ-ನಷ್ಟಗಳನ್ನು ಆಪ್ತರ ಮುಂದೆ ವಿವರಿಸಿ. ಮನಸ್ಸು ಹಗುರ ಮಾಡಿಕೊಳ್ಳುವುದು.
*
ವ್ಯಕ್ತಿತ್ವ ವಿಕಸನ ಪುಸ್ತಕಗಳು ಅಥವಾ ತಮ್ಮ ಮನೆಯ ಫೋಟೋ ಆಲ್ಬಮ್‌ಗಳನ್ನು  ಒಮ್ಮೆ ತಿರುವಿ ಹಾಕಿ.
 ನಾನು ಹೋದ ಮೇಲಾದರೂ ಅವರು ಎಚ್ಚರವಾಗಲಿ  ಎಂಬ ನೆಗೆಟಿವ್ ಯೋಚನೆ ಬಿಟ್ಟು  ನಾನು ಅವರೊಂದಿಗೆ ಇದ್ದು ಅವರನ್ನು ಪ್ರೀತಿಯಿಂದ ಬದಲಾಯಿಸುತ್ತೇನೆ  ಎಂಬ ಪಾಸಿಟಿವ್ ಯೋಚನೆ ಮಾಡುವುದು.

ಸ್ವಾಮಿ ವಿವೇಕಾನಂದರ  ಹೇಳಿಕೆಯಂತೆ  ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ.  ಖಂಡಿತ ನಿಜ. ಮನಸ್ಸು ಸದೃಢಗೊಳ್ಳುತ್ತಾ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ, ನಮಗೆ ಹಿತ-ಮಿತ ಆಹಾರ, ಕೆಲಸಕ್ಕೆ ತಕ್ಕ ವಿಶ್ರಾಂತಿ, ಯೋಗ, ಪ್ರಾಣಾಯಾಮ ಧ್ಯಾನದ ಅನುಭೂತಿಗಳು ಅವಶ್ಯ.

No comments:

Post a Comment