Tuesday, February 28, 2012

ಸೆಕ್ಸ್ ಅಂದ್ರೆ ಮೂಗು ಮುರಿಯೋ ಕಾಲ ಹೋಗಿದೆ !

ಜಾಗತೀಕರಣದ ಫಲವೋ ಎಂಬಂತೆ ಸೆಕ್ಸ್ - ಲೈಂಗಿಕತೆ ಎಂಬುದು ಇದೀಗ ತನ್ನ 'ಅಶ್ಲೀಲತೆ'ಯನ್ನು ಕಳೆದುಕೊಳ್ಳುತ್ತಿದೆ. ನಗರ ಜೀವನದಲ್ಲಿ ಇದು ಈ ಅಶ್ಲೀಲತೆಯ ಪೊರೆ ಕಳಚಿಕೊಳ್ಳುತ್ತಿದ್ದರೂ, ಭಾರತದ ಗ್ರಾಮೀಣ ಭಾಗದಲ್ಲಿನ್ನೂ ಸೆಕ್ಸ್ ಎಂಬುದು ಹೊಲಸು ಪದವಾಗಿಯೇ ಉಳಿದಿದೆ. ಇದನ್ನು ಹೇಳಿದವರು 'ರಿವೈಸ್ಡ್ ಕಾಮ ಸೂತ್ರ' (ಪರಿಷ್ಕೃತ ಕಾಮಸೂತ್ರ) ಎಂಬ ವಿಶ್ವ ವಿಖ್ಯಾತ ಕೃತಿಯ ಲೇಖಕ, ಮಂಗಳೂರು ಮೂಲದ ರಿಚರ್ಡ್ ಕ್ರಾಸ್ತಾ.
ಹೌದು ಅನ್ನಿಸುವುದಿಲ್ಲವೇ?
ಬಹುತೇಕ ಭಾರತೀಯರಿಗೆ ಸೆಕ್ಸ್ ಅನ್ನೋದು ಈಗಲೂ ಹೊಲಸು ಪದವೇ. ಹೀಗಾಗಿ ಅವರು ಅದರ ಅನುಭವವನ್ನು ಆನಂದಿಸಲು ಮತ್ತು ಅದಕ್ಕೆ ಒಗ್ಗಿಕೊಳ್ಳಲು ಸಮಯ ಹಿಡಿಯುತ್ತದೆ ಎನ್ನುತ್ತಾರವರು. ಇಪ್ಪತ್ತು ವರ್ಷಗಳ ಹಿಂದೆ ಬರೆದಿದ್ದ 'ದಿ ರಿವೈಸ್ಡ್ ಕಾಮ ಸೂತ್ರ' ಕಾದಂಬರಿಯನ್ನು ಅವರೀಗ ಮರು ಮುದ್ರಿಸಿ ಹೊಸ ಅಲೆ ಸೃಷ್ಟಿಸಿದ್ದಾರೆ.
ನಗರ ಪ್ರದೇಶದಲ್ಲಿರುವವರಲ್ಲಿ ಲೈಂಗಿಕ ಸ್ವಾತಂತ್ರ್ಯವು ಗಮನಾರ್ಹವಾಗಿ ಹೆಚ್ಚಿದೆ. ಅವರೆಲ್ಲಾ ಸೆಕ್ಸ್ ಬಗ್ಗೆ ಮಾತುಕತೆಯಲ್ಲಿ ತುಂಬಾ ಲಿಬರಲ್ ಆಗಿರುತ್ತಾರೆ. ಆದರೆ ಕೆಳ ಮಧ್ಯಮ ವರ್ಗದಲ್ಲಿ ಶೇ.95ರಷ್ಟು ಮಂದಿಗೆ ಈ ಕುರಿತು ಹಿಂಜರಿಕೆ ಇದೆ ಎನ್ನುತ್ತಾರೆ ಕ್ರಾಸ್ತಾ.
ಭಾರತೀಯರಿಗೆ ಕನ್ಯತ್ವ ಎಂಬುದು ಅತ್ಯಂತ ಮಹತ್ವದ್ದು. ಆದರೂ ಇಲ್ಲಿ ಆಷಾಢಭೂತಿತನವು ಅತಿದೊಡ್ಡ ಸಮಸ್ಯೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ.
ಯುವ ದಂಪತಿಗಳು ಸದ್ಯಕ್ಕೆ ಮಕ್ಕಳು ಬೇಡ ಎನ್ನುತ್ತಾ, ತಮ್ಮ ವೃತ್ತಿಯ ಮೇಲೆ, ಆಸ್ತಿ ಮಾಡುವುದರ ಮೇಲೆಯೇ ಗಮನ ಕೇಂದ್ರೀಕರಿಸುತ್ತಿರುವ ಬಗ್ಗೆ ಅವರು ಹೇಳುವುದು - 'ಅದುಮಿಟ್ಟುಕೊಂಡ ಲೈಂಗಿಕ ತೃಷೆಯ ಸ್ಥಾನದಲ್ಲಿ ಹಣ ಬಂದು ಕೂತಿದೆ!'
ಅತ್ಯಂತ ಹೆಚ್ಚು ಚರ್ಚೆಗೀಡಾದ ಮತ್ತು ವಿನೋದಮಯ ಕಾದಂಬರಿಗಳಲ್ಲೊಂದು ದಿ ರಿವೈಸ್ಡ್ ಕಾಮ ಸೂತ್ರ. ಭಾರತೀಯ ಹುಡುಗನೊಬ್ಬ ಪುರುಷನಾಗಿ ಬೆಳೆಯುವ ಹಂತಗಳ ಉಲ್ಲೇಖವಿರುವ ಈ ಕಾದಂಬರಿಗೆ ಭಾರೀ ಟೀಕೆ, ವಿಮರ್ಶೆಗಳು ಬಂದಿವೆ. ಈಗಾಗಲೇ ಲಾತ್ವಿಯನ್, ಹೀಬ್ರೂ ಸೇರಿದಂತೆ 11 ದೇಶಗಳಲ್ಲಿ 8 ಭಾಷೆಗಳಿಗೆ ಈ ಕಾದಂಬರಿ ಭಾಷಾಂತರಗೊಂಡಿದೆ.
ಪುಟ್ಟ ಪಟ್ಟಣವೊಂದರ ಮಧ್ಯಮ ವರ್ಗದ ಹುಡುಗ ವಿಜಯ್ ಪ್ರಭು ಎಂಬಾತ ಕೆಥೊಲಿಕ್ ಬೋರ್ಡಿಂಗ್ ಶಾಲೆಗಳಲ್ಲಿನ ದೌರ್ಜನ್ಯದ ನಡುವೆ ಬೆಳೆಯುವ, 'ದೌರ್ಜನ್ಯದ ಐದು ಸ್ತಂಭ'ಗಳಾದ ಘಂಟೆ, ಬೆತ್ತ, ಲಿಂಗ ದೌರ್ಜನ್ಯ, ಹುಡುಗಿಯ ದೌರ್ಜನ್ಯ ಮತ್ತು ಕ್ರೀಡೆ - ಇವುಗಳ ಸುತ್ತ ಸುತ್ತುತ್ತದೆ.
ಮಂಗಳೂರಿನ ಸಂಪ್ರದಾಯಸ್ಥ ಕುಟುಂಬದ ಕಟ್ಟುಪಾಡುಗಳಿಂದ ಹೊರಬರುವ ತುಡಿತ ಮತ್ತು ಲೈಂಗಿಕ ಬಯಕೆ ಈಡೇರಿಸಿಕೊಳ್ಳುವ ಬಯಕೆಗಳಿಂದ ತುಂಬಿಹೋಗಿರುವ ವಿಜಯ್ ಪ್ರಭು, ಲೈಂಗಿಕ ಮತ್ತು ಆಧ್ಯಾತ್ಮಿಕತೆಯ ಸುದೀರ್ಘ ಪ್ರಯಾಣಕ್ಕೆ ಹೊರಟು, ಮುಕ್ತ ಲೈಂಗಿಕತೆ, ಮುಕ್ತ ಮಾತುಗಳ ನಾಡಾದ ಅಮೆರಿಕಕ್ಕೆ ತಲುಪುತ್ತಾನೆ. ಭಾರತವು ಕಾಮಸೂತ್ರದ ನಾಡು ಮತ್ತು ನಾವು ಮಹಿಳೆಯರ ಶೀಲಭಂಗದಲ್ಲಿಯೂ ಎತ್ತಿದ ಕೈ. ಕಾದಂಬರಿಯಲ್ಲಿನ ಪಾತ್ರಗಳು ಕಾಮ ಸೂತ್ರವನ್ನು ಅಣಕಿಸುತ್ತವೆ ಎನ್ನುತ್ತಾರೆ ಕ್ರಾಸ್ತಾ.
ಪರಿಷ್ಕೃತ ಆವೃತ್ತಿಯನ್ನು ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸುತ್ತಿದೆ. ಕಥೆ ಹಾಗೆಯೇ ಇದೆ, ಅದರ ನಿರೂಪಣೆ ಮತ್ತು ಗುಣಮಟ್ಟವನ್ನು ಸುಧಾರಿಸಲಾಗಿದೆ.
ಒಟ್ಟಾರೆಯಾಗಿ ಈ ಕೃತಿಯು ಸೆಕ್ಸ್, ಬಾಲ್ಯ, ವಸಾಹತುಶಾಹಿತ್ವ, ಆಕಾಂಕ್ಷೆ, ಬಯಕೆ, ಸ್ತ್ರೀ ಮತ್ತು ಅಮೆರಿಕನ್ ಕನಸುಗಳ ಕುರಿತು ಕನಸು ಕಾಣವು ತೃತೀಯ ವಿಶ್ವದ ಮೇಲೆ ಬೆಳಕು ಚೆಲ್ಲುತ್ತದೆ.
ಕೃಪೆ : ವೆಬ್ ದುನಿಯಾ

Sunday, February 19, 2012

ಶಾಂತ ಚಿತ್ತಕ್ಕೆ ನೀರು ಕುಡಿಯಿರಿ....... !


ಲಂಡನ್ (ಪಿಟಿಐ): ನೀರು ಕುಡಿಯುವುದರಿಂದ ಆಗುವ ಲಾಭಗಳು ಎಲ್ಲರಿಗೂ ತಿಳಿದಿದ್ದೇ. ಈ ಪಟ್ಟಿಗೆ ಇನ್ನೊಂದು ಲಾಭ ಈಗ ಸೇರಿಕೊಂಡಿದೆ.

ವ್ಯಕ್ತಿಯನ್ನು ಶಾಂತಚಿತ್ತದಲ್ಲಿಡಲೂ ನೀರು ಸಹಕಾರಿ ಎಂದು ಕನೆಕ್ಟಿಕಟ್ ವಿಶ್ವವಿದ್ಯಾಲಯದ ತಜ್ಞರು ನಡೆಸಿರು ಹೊಸ ಅಧ್ಯಯನವೊಂದು ಹೇಳಿದೆ.

ಅದರಲ್ಲೂ ಮುಖ್ಯವಾಗಿ ವ್ಯಕ್ತಿಯೊಬ್ಬ ಸಂಯಮವನ್ನು ಕಳೆದುಕೊಳ್ಳುತ್ತಿರುವ ಅನುಭವ ಆಗುವ ಸಂದರ್ಭದಲ್ಲಿ ನೀರು ಕುಡಿದರೆ ಆತನ ಮನಸ್ಸು ಶಾಂತಸ್ಥಿತಿಗೆ ಬರುತ್ತದೆ ಎಂದು ಅಧ್ಯಯನ ಹೇಳಿದೆ.

ಅಧ್ಯಯನಕಾರರು ನಿರ್ಜಲೀಕರಣ (ಡಿ ಹೈಡ್ರೇಷನ್) ಕುರಿತಾಗಿಯೂ ಅಧ್ಯಯನ ನಡೆಸಿದ್ದು, ಅಲ್ಪ ಪ್ರಮಾಣದ ನಿರ್ಜಲೀಕರಣ ಕೂಡ ಮನಷ್ಯರ ಭಾವಸ್ಥಿತಿ (ಮೂಡು) ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಪತ್ತೆ ಹಚ್ಚಿದೆ.

ವಿಶೇಷವಾಗಿ ನಿರ್ಜಲೀಕರಣವು ಮಹಿಳೆಯರ ಚಿತ್ತ, ಸಾಮರ್ಥ್ಯದ ಮಟ್ಟ ಮತ್ತು ಸ್ಪಷ್ಟವಾಗಿ ಚಿಂತಿಸುವ ಸಾಮರ್ಥ್ಯಗಳನ್ನು ಬದಲಾಯಿಸಬಹುದು ಎಂದು ಅಧ್ಯಯನದ ವರದಿ ಹೇಳಿರುವುದಾಗಿ `ದಿ ಡೈಲಿ ಮೇಲ್` ವರದಿ ಮಾಡಿದೆ.

`ದೇಹದಲ್ಲಿರುವ ನೀರಿನ ಪ್ರಮಾಣದಲ್ಲಿ ಶೇ 1.5ರಷ್ಟು ನಷ್ಟವಾದರೂ ಅದು ನಮ್ಮ ಮನಸ್ಸಿನ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ಮುಖ್ಯವಾಗಿ ಕಡಿಮೆ ಮಟ್ಟದ ನಿರ್ಜಲೀಕರಣವು ಮಹಿಳೆಯರ ಮೇಲೆ ಹೆಚ್ಚಾಗಿ ವ್ಯತಿರಿಕ್ತ ಪರಿಣಾಮಬೀರುತ್ತದೆ` ಎಂದು ಅಧ್ಯಯನಕಾರರ ತಂಡದ ಸದಸ್ಯರಾಗಿರುವ ಹ್ಯಾರಿಸ್ ಲಿಬರ್‌ಮನ್ ಹೇಳಿದ್ದಾರೆ.

ಅಲ್ಪ ಪ್ರಮಾಣದ ನಿರ್ಜಲೀಕರಣ ಯುವತಿಯರಲ್ಲಿ ತಲೆನೋವು, ಏಕಾಗ್ರತೆ ಕೊರತೆ, ಬಳಲಿಕೆಯನ್ನು ತಂದರೆ, ಯುವಕರಲ್ಲಿ ನೆನಪಿನ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಒತ್ತಡ, ಆಯಾಸ, ತಳವಳವನ್ನು ಉಂಟು ಮಾಡುತ್ತವೆ ಎಂದು ಅಧ್ಯಯನ ವಿವರಿಸಿದೆ.

ಕೃಪೆ : ಪ್ರಜಾವಾಣಿ
 

Wednesday, February 15, 2012

ಬತ್ತಲೆಯಾಗಿ ಮದುವೆಯಾದ ಜೋಡಿಗಳು !

ಕಿಂಗ್‌ಸ್ಟನ್ (ಜಮೈಕಾ) (ಎಪಿ):   ಜಮೈಕಾದ ಪಶ್ಚಿಮ ಭಾಗದಲ್ಲಿರುವ ನೆಗ್ರಿಲ್ ದ್ವೀಪದ ಕಡಲ ಕಿನಾರೆಯಲ್ಲಿ ವಸ್ತ್ರಗಳ ಬಂಧನದಿಂದ ಮುಕ್ತರಾದ ಒಂಬತ್ತು ಜೋಡಿಗಳು ಸೂರ್ಯ ಸಾಕ್ಷಿಯಾಗಿ ಬುಧವಾರ ವಿವಾಹ ಬಂಧನಕ್ಕೆ ಒಳಗಾದರು.

`ಪ್ರೇಮಿಗಳ ದಿನ`ದ ಹಿನ್ನೆಲೆಯಲ್ಲಿ ಯುವ ಸಮೂಹವನ್ನು ಸೆಳೆಯಲು ಇಲ್ಲಿನ ರೆಸಾರ್ಟ್‌ಗಳು `ನಗ್ನ ಮದುವೆ` ಸ್ಪರ್ಧೆಯನ್ನು ಆಯೋಜಿಸಿದ್ದವು. ಜೊತೆಗೆ ನಾಲ್ಕು ರಾತ್ರಿ ಉಚಿತ ವಾಸ್ತವ್ಯದ ಕೊಡುಗೆ ನೀಡುವುದಾಗಿಯೂ ಪ್ರಚಾರ ಮಾಡಿದ್ದವು.


ಈ ಪ್ರಚಾರಕ್ಕೆ ಮನಸೋತ ಅಮೆರಿಕ ಮತ್ತು ಕೆನಡಾದ ನೂರಕ್ಕೂ ಹೆಚ್ಚು ಜೋಡಿಗಳು ಇಲ್ಲಿಗೆ ಲಗ್ಗೆ ಇಟ್ಟವು. ಆದರೆ, 10 ಜೋಡಿಗಳನ್ನು ಮಾತ್ರ ಈ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.


ನಿಯಮ ಉಲ್ಲಂಘಿಸಿದ ಕಾರಣಕ್ಕೆ ಒಂದು ಜೋಡಿ ಮುಹೂರ್ತದ ಹಿಂದಿನ ದಿನ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.

`ಇದೊಂದು ಸುಂದರ ಅನುಭವ, ಯಕ್ಷಲೋಕದಂತೆಯೇ ಇತ್ತು` ಎಂಬುದು ನ್ಯೂಜೆರ್ಸಿಯಿಂದ ಆಗಮಿಸಿದ್ದ 39ರ ಹರೆಯದ ಮಿಲ್ಲಿ ಸಾಲ್ಸ್ ಅವರ ಅಭಿಮತ.
                                                             ಕೃಪೆ : ಪ್ರಜಾವಾಣಿ

Tuesday, February 14, 2012

ವಂಚಕಿ, ಮತ್ತೆ ಸಿಕ್ಕಾಗ ನಿನ್ನ ವಂಚನೆ ಬಗ್ಗೆ ಮಾತಾಡೋಣ !

ನಾನು ಕೊಟ್ಟ ಪ್ರೀತಿ ನಾಟಕದ್ದ ಗೆಳತಿ ? ನನ್ನದು ಶುದ್ಧಾನುಶುದ್ಧ ಪ್ರೇಮ ಕಣೆ. ನಿನ್ನನ್ನು ಅತಿಯಾಗಿ ಅಂದ್ರೆ ಸತ್ತು ಹೋಗುವಷ್ಟು ಪ್ರೀತಿಸಿದ್ದೆ. ಆದರೆ ಅಂತಹ ಪ್ರೀತಿಯನ್ನು ನಾಟಕ ಅನ್ನುವ ಬದಲು, ನಿನಗೆ ಇಷ್ಟವಿಲ್ಲ ಅಂದಿದ್ದರೆ ಸಾಕಿತ್ತು. ಆದರೆ ನೀನು ಹಾಗೆ ಅನ್ನಲೇ ಇಲ್ಲವಲ್ಲೇ. ಪ್ರೀತಿಯ ಹೆಸರಿನಲ್ಲಿ ನೀನು ಹೇಳಿದ ಕೆಲವು ಸುಳ್ಳುಗಳ ಬೆನ್ನುಹತ್ತಿ ಹೋದ ನಾನು ಸತ್ಯದ ಜೊತೆ ನಿನ್ನ ಕಣ್ಮುಂದೆ ಕಾಣಿಸಿಕೊಂಡಿದ್ದರೆ, ನೀನು ಮಾತ್ರ ತಪ್ಪು ಮಾಡಿಯೂ ಕ್ಷಮೆ ಕೇಳದೆ ಅದೊಂದು ಕೋಣೆಯಲ್ಲಿ ಅವಿತು ಕುಳಿತು ಬಿಟ್ಟೆಯಲ್ಲೇ.

ನಾ ಅಲ್ಲಿಗೆ ಬಂದಾಗ ತಪ್ಪಾಯ್ತು ಅಂತ ಒಂದು ಮಾತು ಹೇಳಿದ್ದಿದ್ದರೆ ಪ್ರಳಯವಾಗಿ ಬಿಡುತ್ತಿತ್ತೆ? ನನ್ನ ಕಣ್ಣಲಿ ಕಣ್ಣಿಟ್ಟು ಒಂದು ನೋವಿನ ಸಂಕಟ ವ್ಯಕ್ತಪಡಿಸಿದ್ದರೆ ನಾ ನಿನ್ನ ಬಗ್ಗೆ ಒಂದಿಷ್ಟು ಅನುಕಂಪವಿಡುತ್ತಿದ್ದೆ. ಅರ್ಥಮಾಡಿಕೊಳ್ಳದಷ್ಟು ಪೆದ್ದನೇನಲ್ಲ. ಮೊದಮೊದಲು ನಿನ್ನನ್ನು ಜೀವ ಹೋಗುವಷ್ಟು ಪ್ರೀತಿಸಿದೆ. ಮುಂದೆ -ಮುಂದೆ ನೀ ನನ್ನ ಮನ -ಮನಸ್ಸಿನಿಂದ ಜಾರಿ ಹೋಗತೊಡಗುತ್ತಿದ್ದೀಯ ಎಂಬುದು ಅರವಿಗೆ ಬರುತ್ತಿದಂತೆಯೇ ತಾಯಿಯನ್ನು ಕಳೆದುಕೊಂಡ ಮಗು ರೋಧಿಸುವಂತೆ ಮೌನದಲ್ಲೇ ರೋಧಿಸತೊಡಗಿದೆ. ದಿನ ನಿತ್ಯವೆಂಬಂತೆ ನನ್ನ ಮುಗ್ಧ ಪ್ರೀತಿಯ ಜೊತೆ ನೀನು ಆಟವಾಡಿದೆ.

ಕಡೆಗೊಂದು ದಿನ ನೀ ನನ್ನ ಬಿಟ್ಟು ಹೋಗುತ್ತೇನೆಂದು ಹೊರಟು ನಿಂತಾಗ ಮೊಟ್ಟ ಮೊದಲ ಬಾರಿಗೆ ಬಿಟ್ಟು ಹೋಗಬೇಡ ಎಂದು ಕಣ್ಣಿರಿಟ್ಟಿದ್ದೆ. ಎರಡು ಕೈ ಚಾಚಿ ನಿಂತು ನಿನ್ನ ತಬ್ಬಿಕೊಂಡು ಒಂದೇ ಒಂದು ಭರವಸೆಗಾಗಿ ಅಂಗಲಾಚಿದ್ದೆ. ಒಂದು ಸಲವಾದರೂ ನೀ ನನ್ನ ಬಿಟ್ಟು ಹೋಗೋದಿಲ್ಲ, ಎಂದೆಂದೂ ನನ್ನ ಜೊತೆಯಲ್ಲಿರುತ್ತಿ ಎಂಬ ಮಾತನ್ನು ಆಡುತ್ತಿ ಅಂತ ಕಾತುರದಿಂದ ನೋಡಿದೆ. ಆದರೆ ನಾನು ಕಣ್ಣೊರೆಸಿಕೊಂಡು ಇನ್ನೇನು ಅಳು ನಿಲ್ಲಿಸಬೇಕೆಂದುಕೊಂಡಾಗಲೂ ನಿನ್ನ ಬಾಯಿಂದ ಅಂಥದೊಂದು ಮಾತು ಹೊರಬರಲೇ ಇಲ್ಲ.

ಬದುಕಿನ ಮುಂದಿನ ಕನಸಿನ ಬಗ್ಗೆ ಅದೆಷ್ಟು ಬಾರಿ ನಿನ್ನ ಮುಂದೆ ಹೇಳಿಕೊಂಡಿದ್ದೆ. ಆದರೆ ಒಂದೇ ಒಂದು ಮಾತಿಗೂ ನೀ ಭರವಸೆ ನೀಡಲೇ ಇಲ್ಲ. ನಾವು ಒಬ್ಬರನೊಬ್ಬರು ವಂಚಿಸಿಕೊಳ್ಳಲಿಲ್ಲ್ವೇನೋ, ಆದರೆ ನಿನ್ನ ಪ್ರತಿ ಮಾತಿನಲ್ಲಿಯೂ ಆತ್ಮವಂಚನೆ ಇತ್ತು. ಅಸಲಿಗೆ, ನಿನಗೆ ನನ್ನ ಭೇಟಿಯಾಗುವ, ಜೊತೆಸೇರಿ ಹರಟುವ ಸಂಭ್ರಮವೇ ನಿನ್ನಲ್ಲಿ ಇರಲಿಲ್ಲ ಅಲ್ಲವಾ? ದುರಂತವೆಂದರೆ ನಾನು ಕಳೆದುಹೋಗುತಿದ್ದೇನೆಂಬುದು ನೀನಾಡುವ ಪ್ರತಿಯೊಂದು ಮಾತುಗಳಲ್ಲಿ ಹಂತಹಂತವಾಗಿ ಗೊತ್ತಾಗುತ್ತಿತ್ತು. ಆದರೂ ನಾನು ಅಂತಿಮ ಆಘಾತಕ್ಕೆ ಸಿದ್ದನಾಗಲೇ ಇಲ್ಲ. ಯಾಕೆಂದರೆ ನೀನು ಅಷ್ಟು ಸುಲಭದಲ್ಲಿ ನನ್ನನ್ನು ಬಿಟ್ಟು ಹೋಗಲಾರೆ ಎಂದು ನಂಬಿಕೆ ಇತ್ತು.

ಬಿಡು ಅದೆಲ್ಲ ಈಹ ನೆನೆದು ಪ್ರಯೋಜನವಿಲ್ಲ. ನಿನ್ನ ಸಂಕಟಗಳು ಎನಿದ್ದವೋ ಅಲ್ವ? ನಾನು ಸುಮ್ಮನೆ ನಿನ್ನನ್ನು ಅಂದು ಏನು ಪ್ರಯೋಜನ? ಒಂದಿಷ್ಟು ತಿಂಗಳು ಪ್ರೀತಿಸಿದವನ ಕೈಗೆ ಬದುಕಿನ ಇನ್ನುಳಿದ ವರ್ಷಗಳನ್ನು ಒಪ್ಪಿಸಿ ಬಿಡೋದಕ್ಕಾಗುತ್ತ? ಬಿಡು ಇದೆಲ್ಲ ಕೆಲಸಕ್ಕೆ ಬಾರದ ಮಾತು ಅಂತ ನೀನಂದು ಕೊಂಡಿರಬಹುದು. ಪದೇ-ಪದೇ ಇದೆಲ್ಲ ನೆನಪು ಮಾಡಿ ನಿನ್ನ ಕಾಡುವುದಿಲ್ಲ. ಆಗಿ ಹೋದ ಮೋಸದ ಪ್ರೀತಿಗೆ ಹಲುಬಿ ಪ್ರಯೋಜನವಿಲ್ಲ. ಬದುಕು ತೀರ ಚಿಕ್ಕದು, ಜಗತ್ತು ಬಹಳ ದೊಡ್ಡದು. ಮನಸ್ಸನ್ನಂತೂ ಗಟ್ಟಿಮಾಡಿಕೊಂಡಿದ್ದೇನೆ. ಎಲ್ಲಿಯಾದರೂ ಮತ್ತೆ ಸಿಕ್ಕರೆ ನಿನ್ನ ವಂಚನೆ ಮತ್ತು ನನ್ನ ನಂಬಿಕೆಯ ಪ್ರೀತಿಯ ಬಗ್ಗೆ ಮತ್ತೊಮ್ಮೆ ಮಾತಿಗಿಳಿಯೋಣ. ಏನಂತೀಯಾ?
                                                                                                             ಶಿವಕುಮಾರ್, ಹೊಸಂಗಡಿ

Monday, February 13, 2012

ಚುಕ್ಕಿ ಚಂದ್ರಮನಲ್ಲೂ ನಿನ್ನನ್ನೇ ಹುಡುಕುತ್ತಾ...

ಹುಡುಗೀ,
"ಎಲ್ಲಿಯೋ ಮಧು ಬಟ್ಟಲು ಒಡೆದ ಸದ್ದು! ಯಾರ ಹೃದಯ ಚೂರಾಯಿತೋ?"ಎಂದು ಕೇಳಿದವನು ಗಾಲಿಬ್.

ಈ ಬದುಕಿನಲ್ಲಿ ಪ್ರೀತಿಯನ್ನು ಅನುಭವಿಸಿದಷ್ಟೇ ತೀವ್ರವಾಗಿ ವಿಷಾಧವನ್ನೂ ಅನುಭವಿಸಿದವರಿಗೆ ಮಾತ್ರ ಆ ಸದ್ದು ಕೇಳುತ್ತದೆ. ಅಂತಹ ಪ್ರತಿ ಸದ್ದಿನ ಹಿಂದೆ ಒಂದು ವಂಚನೆ ಇರಬಹುದು ಅಥವಾ ಒಂದು ಅಮಾಯಕ ನಂಬಿಕೆ ಇರಬಹುದು!

ಮಲೆನಾಡಿನ ಮಾಮರದಲ್ಲೆಲ್ಲೋ ಚಿಗುರು ತಿಂದು ಕೂಗಿದ ಕೋಗಿಲೆಯ ಕೂಹೂವಿಗೆ ಬಯಲು ಸೀಮೆಯ ಮೂಲೆಯಲ್ಲಿರುವ ಮರದ ಮೇಲೆ ಕುಳಿತ ಹೆಸರಿಲ್ಲದ ಹಕ್ಕಿ ಅನುಭವಿಸಿದ ಹೇಳಿಕೊಳ್ಳಲಾಗದ ಖುಷಿಯಂತೆ ಈ ಬದುಕಿನಲಿ ನಡೆದು ಬಂದೆ! ಬರೀ ಕಿಳರಿಮೆಗಳೇ ತುಂಬಿದ ಈ ಹುಡುಗನ ಆತ್ಮವಿಶ್ವಾಸದಂತೆ!! ಆಮೇಲೇನಿದೆ ಈ ಬಾನು, ಈ ಭೂಮಿ ಯಾವುದು ಸಾಲದೆಂಬಂತೆ ತಿರುಗಾಡಿಬಿಟ್ಟೆವು ಸ್ಟಾರ್ ಹೋಟೆಲಿನಿಂದ ಬೀದಿ ಬದಿಯ ಗೊಲಗುಪ್ಪೆ ವರೆಗೆ. ಎಲ್ಲೆಲ್ಲು ನಾವೇ!!

ಒಂದೇ ಯೋಚನೆ,ಯೋಜನೆ,ಅಭಿರುಚಿ,ಕನಸು ಎಲ್ಲವು ಇದ್ದೂ, ನಾವು ಬೇರೆಯಾಗಿದ್ದು ಯಾಕೆ? I think ಇದು ಯಾವತ್ತಿಗೂ ಬಗೆಹರಿಯದ ಪ್ರಶ್ನೆ! ನಮ್ಮ ಅಹಂ, attitude, possessiveness, ಹೊಂದಾಣಿಕೆ, ಹಠ, ಜಗಳ ಹೀಗೆ ನೂರು ಕಾರಣಗಳು ಇದ್ದರೂ, ತಪ್ಪು ಯಾರದೇ ಇದ್ದರೂ ಸೋನು, ಚೂರೆ ಚೂರು ಇದೆಲ್ಲವನ್ನೂ ಬಿಟ್ಟು ಯೋಚನೆ ಮಾಡಿ ನೋಡು ಕೂಡಿ ಬದುಕಲಿಕ್ಕೆ ಸಾವಿರ ಕಾರಣ ಸಿಕ್ಕಾವು.


ಹೆಸರೇ ಕೇಳದ ದೂರದ ಊರುಗಳಲ್ಲಿ ಹುಟ್ಟಿ, ಬೆಳೆದು ಕೇವಲ ಈ ಪ್ರೀತಿಗಾಗಿಯೇ ನಾವಿಬ್ಬರು ಸೇರಿದೆವೇನೋ ಅನಿಸುತ್ತದೆ. ಬಿಡು ಇದೆಲ್ಲ ನನ್ನ ಪೆದ್ದು ಮನಸಿನ ಭಾವುಕ ಕನವರಿಕೆ ಇರಬಹುದು. ಇಡೀ ಬದುಕನ್ನು ಒಂದು ಲ್ಯಾಬ್ ನಲ್ಲಿನ ಪ್ರಾಕ್ಟಿಕಲ್ ಎಂದು ತಿಳಿದ ಸೈನ್ಸ್ ಹುಡುಗಿಯಲ್ಲವೇ ನೀನು? ಹಾಳು ಹಂಪೆಯ ಕಲ್ಲಿನ ರಥದ ಮುಂದೆ ನಿಂತು ಅಂದಿನ ಶ್ರೀ ಕೃಷ್ಣ ದೇವರಾಯನ ಸುವರ್ಣ ಕಾಲಕ್ಕೆ ಹೋಗಿ, ಅಂದಿನ ವೈಭವವನ್ನು ಇಂದು ಅನುಭವಿಸುವ ಇತಿಹಾಸ ಕಲಿತವನ ಮನದ ಭಾವುಕತೆ ನಿನಗೆಲ್ಲಿ ಅರ್ಥವಾದೀತು?

ಹುಣ್ಣಿಮೆಯ ರಾತ್ರಿ ಗೆಳತಿಯರೋಡಗೂಡಿ ಪಾನಿಪುರಿ ತಿಂದು ಬಂದು ಯಾವುದೊ ಇಂಗ್ಲಿಷ್ ಸಿನಿಮಾ ನೋಡೋಳಿಗೆ ಟೆರೇಸಿನ ಮೇಲೆ ಮಲಗಿ ಚುಕ್ಕಿಗಳೊಂದಿಗೆ ಮಾತನಾಡುತ್ತ, ಚಂದ್ರನ ಮೇಲೊಂದು ಕವಿತೆ ಕಟ್ಟಲು ಪರದಾಡುತಿರುವ ಈ ಹುಡುಗ ಹುಚ್ಚನ ಹಾಗೆ ಕಂಡರೆ ಅದು ನಿನ್ನ ತಪ್ಪಲ್ಲ ಬಿಡು. ಅಸಂಖ್ಯಾತ ಚುಕ್ಕಿಗಳಲು, ಚಲುವಾಂತ ಚನ್ನಿಗ ಚಂದ್ರನ ಮುಖದಲ್ಲೂ, ನಿನ್ನನ್ನೇ ಹುಡುಕುತಿರುವ ಈ ಪೆದ್ದು ಮನಸಿನ ಹುಡುಗ ನಿನಗೆ ನೆನಪಾಗುತ್ತಿಲ್ಲವೇ? I Miss You ಕಣೇ...
I Love You.
                                                                                                                 ಗಿರೀಶ್ ಕುಲಕರ್ಣಿ

Sunday, February 12, 2012

ಪ್ರೇಮಿಗಳ ದಿನಕ್ಕೆ ಇಲ್ಲ ಅಡ್ಡಿ ! ಹ್ಯಾಪಿ ವ್ಯಾಲೆಂಟೇನ್ ಡೇ !


ನವದೆಹಲಿ (ಪಿಟಿಐ/ ಐಎಎನ್ಎಸ್): ಪ್ರೇಮಿಗಳಿಗೆ ಇಲ್ಲಿದೆ ಸಂತಸದ ಸುದ್ದಿ! ಬಲಪಂಥೀಯ ಸಂಘಟನೆಗಳು ಈ ವರ್ಷದ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸದಿರಲು ನಿರ್ಧರಿಸಿವೆ. ಹಾಗಾಗಿ ಫೆಬ್ರುವರಿ 14ರಂದು ಯುವ ಜೋಡಿಗಳು ನಿರಾತಂಕವಾಗಿ ಪ್ರೇಮಿಗಳ ದಿನ ಆಚರಿಸಬಹುದು.

ಬಲಪಂಥೀಯ ಸಂಘಟನೆಗಳ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡುತ್ತಿರುವುದೇ ವಿರೋಧ ವ್ಯಕ್ತಪಡಿಸದಿರಲು ಪ್ರಮುಖ ಕಾರಣ ಎನ್ನಲಾಗಿದೆ.

`ಕಳೆದ ವರ್ಷದಿಂದ ಪ್ರೇಮಿಗಳ ದಿನವನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದನ್ನು ಕೈಬಿಟ್ಟಿದ್ದೇವೆ. ಪ್ರೇಮಿಗಳ ದಿನ ಆಚರಿಸುವುದನ್ನು ನಾವು ತಪ್ಪಿಸಲು ಆಗುವುದಿಲ್ಲ. ಅಲ್ಲದೇ ಅದಕ್ಕೆ ವಿರೋಧಿಸುತ್ತಿರುವುದರಿಂದ ನಮ್ಮ ಬಗ್ಗೆ ಜನರಿಗೆ ತಪ್ಪು ಭಾವನೆ ಬರುತ್ತಿದೆ` ಎಂದು ಶಿವಸೇನಾದ ದೆಹಲಿ ಘಟಕದ ಸಂಯೋಜಕ ಓಂ ದತ್ತ ಪ್ರಕಾಶ್ ಹೇಳಿದ್ದಾರೆ.

`ಪ್ರೇಮಿಗಳ ದಿನ ಆಚರಿಸುವ ಪ್ರೇಮಿಗಳು ನಮ್ಮ ಕಣ್ಣಿಗೆ ಬಿದ್ದರೆ ಮದುವೆ ಮಾಡಿಸುತ್ತೇವೆ ಅಥವಾ ಅವರನ್ನು ಪೋಷಕರು, ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದೆವು. ಆದರೆ, ಈ ವರ್ಷ ತಡೆ ಒಡ್ಡದಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ` ಎಂದು ಬಜರಂಗ ದಳದ ಕಾರ್ಯಕರ್ತ ವಿನೋದ್ ಶರ್ಮ ಹೇಳಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಶ್ರೀರಾಮ ಸೇನೆಯು, ಪ್ರೇಮಿಗಳ ದಿನಾಚರಣೆ ಪಾಶ್ಚಾತ್ಯರ ಅಂಧಾನುಕರಣೆ ಎಂದು ಆರೋಪಿಸಿ ಜಮ್ಮುವಿನಲ್ಲಿ ಭಾನುವಾರ ಶುಭಾಶಯ ಪತ್ರಗಳನ್ನು ಸುಟ್ಟಿದೆ.

`ಪ್ರೇಮಿಗಳ ದಿನ ಆಚರಿಸುವುದಕ್ಕೆ ನಮ್ಮ ಬೆಂಬಲ ಇಲ್ಲ. ಆದರೆ, ಇದಕ್ಕೆ ಭಿನ್ನ ಮಾರ್ಗದಲ್ಲಿ ವಿರೋಧಿಸಲು ಯೋಜನೆ ರೂಪಿಸಲಾಗಿದೆ` ಎಂದು ವಿಶ್ವ ಹಿಂದೂ ಪರಿಷತ್‌ನ ವಿಜಯ್ ಬನ್ಸಲ್ ತಿಳಿಸಿದ್ದಾರೆ.

`ಪ್ರೇಮಿಗಳ ದಿನಾಚರಣೆಯಂದು ಯುವ ಪ್ರೇಮಿಗಳು ಅಸಭ್ಯ ನೃತ್ಯ ಸೇರಿದಂತೆ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳಲು ಕೋರಿ ದೆಹಲಿ ಮತ್ತು ಸುತ್ತಮುತ್ತಲಿನ ಪಬ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ` ಎಂದು ಬನ್ಸಲ್ ತಿಳಿಸಿದ್ದಾರೆ.

`ಯುವಕ/ಯುವತಿಯರಿಂದ ಹಣ ಸುಲಿಯುವ ಏಕೈಕ ಉದ್ದೇಶದಿಂದ ಬಹುರಾಷ್ಟ್ರೀಯ ಕಂಪೆನಿಗಳು ಇಂತಹ ದಿನಗಳ ಆಚರಣೆಗೆ ಹೆಚ್ಚಿನ ಪ್ರಚಾರ ಮತ್ತು ಒತ್ತು ನೀಡುತ್ತಿವೆ. ಆ ದಿನ ಪ್ರೇಮಿಗಳು ಶುಭಾಶಯ ಪತ್ರ, ಹೂ, ಚಿನ್ನದ ಆಭರಣ, ಚಾಕೊಲೇಟ್, ಮೊಬೈಲ್, ಎಂಪಿ3 ಪ್ಲೇಯರ್, ಕೈ ಗಡಿಯಾರವನ್ನು ಕಾಣಿಕೆಯಾಗಿ ನೀಡಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ. ಇಂತಹ ಹಣ ಮಾಡುವ ದಂಧೆಯ ವಿರುದ್ಧ ಯುವಜನಾಂಗ ಎಚ್ಚೆತ್ತುಕೊಳ್ಳಬೇಕು` ಎಂದು ರಾಷ್ಟ್ರವಾದಿ ಶಿವಸೇನಾದ ಜೈ ಭಗವಾನ್ ಗೋಯಲ್ ಸಲಹೆ ನೀಡಿದ್ದಾರೆ.

`ಕಳೆದ ಸಾಲಿನ ಪ್ರೇಮಿಗಳ ದಿನಾಚರಣೆಯ ವಾರದಲ್ಲಿ 12,000 ಕೋಟಿ ರೂಪಾಯಿ ವ್ಯವಹಾರ ನಡೆದಿತ್ತು` ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ತಿಳಿಸಿದೆ.
                                                                                                            ಕೃಪೆ : ಪ್ರಜಾವಾಣಿ