Tuesday, February 14, 2012

ವಂಚಕಿ, ಮತ್ತೆ ಸಿಕ್ಕಾಗ ನಿನ್ನ ವಂಚನೆ ಬಗ್ಗೆ ಮಾತಾಡೋಣ !

ನಾನು ಕೊಟ್ಟ ಪ್ರೀತಿ ನಾಟಕದ್ದ ಗೆಳತಿ ? ನನ್ನದು ಶುದ್ಧಾನುಶುದ್ಧ ಪ್ರೇಮ ಕಣೆ. ನಿನ್ನನ್ನು ಅತಿಯಾಗಿ ಅಂದ್ರೆ ಸತ್ತು ಹೋಗುವಷ್ಟು ಪ್ರೀತಿಸಿದ್ದೆ. ಆದರೆ ಅಂತಹ ಪ್ರೀತಿಯನ್ನು ನಾಟಕ ಅನ್ನುವ ಬದಲು, ನಿನಗೆ ಇಷ್ಟವಿಲ್ಲ ಅಂದಿದ್ದರೆ ಸಾಕಿತ್ತು. ಆದರೆ ನೀನು ಹಾಗೆ ಅನ್ನಲೇ ಇಲ್ಲವಲ್ಲೇ. ಪ್ರೀತಿಯ ಹೆಸರಿನಲ್ಲಿ ನೀನು ಹೇಳಿದ ಕೆಲವು ಸುಳ್ಳುಗಳ ಬೆನ್ನುಹತ್ತಿ ಹೋದ ನಾನು ಸತ್ಯದ ಜೊತೆ ನಿನ್ನ ಕಣ್ಮುಂದೆ ಕಾಣಿಸಿಕೊಂಡಿದ್ದರೆ, ನೀನು ಮಾತ್ರ ತಪ್ಪು ಮಾಡಿಯೂ ಕ್ಷಮೆ ಕೇಳದೆ ಅದೊಂದು ಕೋಣೆಯಲ್ಲಿ ಅವಿತು ಕುಳಿತು ಬಿಟ್ಟೆಯಲ್ಲೇ.

ನಾ ಅಲ್ಲಿಗೆ ಬಂದಾಗ ತಪ್ಪಾಯ್ತು ಅಂತ ಒಂದು ಮಾತು ಹೇಳಿದ್ದಿದ್ದರೆ ಪ್ರಳಯವಾಗಿ ಬಿಡುತ್ತಿತ್ತೆ? ನನ್ನ ಕಣ್ಣಲಿ ಕಣ್ಣಿಟ್ಟು ಒಂದು ನೋವಿನ ಸಂಕಟ ವ್ಯಕ್ತಪಡಿಸಿದ್ದರೆ ನಾ ನಿನ್ನ ಬಗ್ಗೆ ಒಂದಿಷ್ಟು ಅನುಕಂಪವಿಡುತ್ತಿದ್ದೆ. ಅರ್ಥಮಾಡಿಕೊಳ್ಳದಷ್ಟು ಪೆದ್ದನೇನಲ್ಲ. ಮೊದಮೊದಲು ನಿನ್ನನ್ನು ಜೀವ ಹೋಗುವಷ್ಟು ಪ್ರೀತಿಸಿದೆ. ಮುಂದೆ -ಮುಂದೆ ನೀ ನನ್ನ ಮನ -ಮನಸ್ಸಿನಿಂದ ಜಾರಿ ಹೋಗತೊಡಗುತ್ತಿದ್ದೀಯ ಎಂಬುದು ಅರವಿಗೆ ಬರುತ್ತಿದಂತೆಯೇ ತಾಯಿಯನ್ನು ಕಳೆದುಕೊಂಡ ಮಗು ರೋಧಿಸುವಂತೆ ಮೌನದಲ್ಲೇ ರೋಧಿಸತೊಡಗಿದೆ. ದಿನ ನಿತ್ಯವೆಂಬಂತೆ ನನ್ನ ಮುಗ್ಧ ಪ್ರೀತಿಯ ಜೊತೆ ನೀನು ಆಟವಾಡಿದೆ.

ಕಡೆಗೊಂದು ದಿನ ನೀ ನನ್ನ ಬಿಟ್ಟು ಹೋಗುತ್ತೇನೆಂದು ಹೊರಟು ನಿಂತಾಗ ಮೊಟ್ಟ ಮೊದಲ ಬಾರಿಗೆ ಬಿಟ್ಟು ಹೋಗಬೇಡ ಎಂದು ಕಣ್ಣಿರಿಟ್ಟಿದ್ದೆ. ಎರಡು ಕೈ ಚಾಚಿ ನಿಂತು ನಿನ್ನ ತಬ್ಬಿಕೊಂಡು ಒಂದೇ ಒಂದು ಭರವಸೆಗಾಗಿ ಅಂಗಲಾಚಿದ್ದೆ. ಒಂದು ಸಲವಾದರೂ ನೀ ನನ್ನ ಬಿಟ್ಟು ಹೋಗೋದಿಲ್ಲ, ಎಂದೆಂದೂ ನನ್ನ ಜೊತೆಯಲ್ಲಿರುತ್ತಿ ಎಂಬ ಮಾತನ್ನು ಆಡುತ್ತಿ ಅಂತ ಕಾತುರದಿಂದ ನೋಡಿದೆ. ಆದರೆ ನಾನು ಕಣ್ಣೊರೆಸಿಕೊಂಡು ಇನ್ನೇನು ಅಳು ನಿಲ್ಲಿಸಬೇಕೆಂದುಕೊಂಡಾಗಲೂ ನಿನ್ನ ಬಾಯಿಂದ ಅಂಥದೊಂದು ಮಾತು ಹೊರಬರಲೇ ಇಲ್ಲ.

ಬದುಕಿನ ಮುಂದಿನ ಕನಸಿನ ಬಗ್ಗೆ ಅದೆಷ್ಟು ಬಾರಿ ನಿನ್ನ ಮುಂದೆ ಹೇಳಿಕೊಂಡಿದ್ದೆ. ಆದರೆ ಒಂದೇ ಒಂದು ಮಾತಿಗೂ ನೀ ಭರವಸೆ ನೀಡಲೇ ಇಲ್ಲ. ನಾವು ಒಬ್ಬರನೊಬ್ಬರು ವಂಚಿಸಿಕೊಳ್ಳಲಿಲ್ಲ್ವೇನೋ, ಆದರೆ ನಿನ್ನ ಪ್ರತಿ ಮಾತಿನಲ್ಲಿಯೂ ಆತ್ಮವಂಚನೆ ಇತ್ತು. ಅಸಲಿಗೆ, ನಿನಗೆ ನನ್ನ ಭೇಟಿಯಾಗುವ, ಜೊತೆಸೇರಿ ಹರಟುವ ಸಂಭ್ರಮವೇ ನಿನ್ನಲ್ಲಿ ಇರಲಿಲ್ಲ ಅಲ್ಲವಾ? ದುರಂತವೆಂದರೆ ನಾನು ಕಳೆದುಹೋಗುತಿದ್ದೇನೆಂಬುದು ನೀನಾಡುವ ಪ್ರತಿಯೊಂದು ಮಾತುಗಳಲ್ಲಿ ಹಂತಹಂತವಾಗಿ ಗೊತ್ತಾಗುತ್ತಿತ್ತು. ಆದರೂ ನಾನು ಅಂತಿಮ ಆಘಾತಕ್ಕೆ ಸಿದ್ದನಾಗಲೇ ಇಲ್ಲ. ಯಾಕೆಂದರೆ ನೀನು ಅಷ್ಟು ಸುಲಭದಲ್ಲಿ ನನ್ನನ್ನು ಬಿಟ್ಟು ಹೋಗಲಾರೆ ಎಂದು ನಂಬಿಕೆ ಇತ್ತು.

ಬಿಡು ಅದೆಲ್ಲ ಈಹ ನೆನೆದು ಪ್ರಯೋಜನವಿಲ್ಲ. ನಿನ್ನ ಸಂಕಟಗಳು ಎನಿದ್ದವೋ ಅಲ್ವ? ನಾನು ಸುಮ್ಮನೆ ನಿನ್ನನ್ನು ಅಂದು ಏನು ಪ್ರಯೋಜನ? ಒಂದಿಷ್ಟು ತಿಂಗಳು ಪ್ರೀತಿಸಿದವನ ಕೈಗೆ ಬದುಕಿನ ಇನ್ನುಳಿದ ವರ್ಷಗಳನ್ನು ಒಪ್ಪಿಸಿ ಬಿಡೋದಕ್ಕಾಗುತ್ತ? ಬಿಡು ಇದೆಲ್ಲ ಕೆಲಸಕ್ಕೆ ಬಾರದ ಮಾತು ಅಂತ ನೀನಂದು ಕೊಂಡಿರಬಹುದು. ಪದೇ-ಪದೇ ಇದೆಲ್ಲ ನೆನಪು ಮಾಡಿ ನಿನ್ನ ಕಾಡುವುದಿಲ್ಲ. ಆಗಿ ಹೋದ ಮೋಸದ ಪ್ರೀತಿಗೆ ಹಲುಬಿ ಪ್ರಯೋಜನವಿಲ್ಲ. ಬದುಕು ತೀರ ಚಿಕ್ಕದು, ಜಗತ್ತು ಬಹಳ ದೊಡ್ಡದು. ಮನಸ್ಸನ್ನಂತೂ ಗಟ್ಟಿಮಾಡಿಕೊಂಡಿದ್ದೇನೆ. ಎಲ್ಲಿಯಾದರೂ ಮತ್ತೆ ಸಿಕ್ಕರೆ ನಿನ್ನ ವಂಚನೆ ಮತ್ತು ನನ್ನ ನಂಬಿಕೆಯ ಪ್ರೀತಿಯ ಬಗ್ಗೆ ಮತ್ತೊಮ್ಮೆ ಮಾತಿಗಿಳಿಯೋಣ. ಏನಂತೀಯಾ?
                                                                                                             ಶಿವಕುಮಾರ್, ಹೊಸಂಗಡಿ

No comments:

Post a Comment