Friday, February 3, 2012

ಕೆಸರಗದ್ದೆಯಲ್ಲಿ ಹೆಂಡತಿಯ ಹೊತ್ತೋಡುವ ಪಂಥ !


  • ಕಳೆದ ಬಾರಿ ಸುಮಾರು ಹತ್ತು ಜೋಡಿಗಳು ಈ ಗಮ್ಮತ್ತಿನ ಓಟದಲ್ಲಿ ಪಾಲ್ಗೊಂಡಿದ್ದವು. (ಫೈಲ್‌ ಚಿತ್ರ)

    •                                        Udayavani | Jan 31, 2012

       ಕೆಸರು ಗದ್ದೆ, ಹೆಂಡತಿಯನ್ನು ಬೆನ್ನು, ಹೆಗಲ ಮೇಲೆ ಹೊತ್ತುಕೊಂಡ ಗಂಡುಗಲಿಗಳು, ಸುತ್ತಲೂ ಈ ಗಮ್ಮತ್ತನ್ನು ನೋಡುವ ಸಹಸ್ರಾರು ಕಣ್ಣುಗಳು, ಅವರ ತಮಾಶೆ, ಬೊಬ್ಬೆ, ಹರ್ಷೋದ್ಗಾರಗಳ ನಡುವೆ ಈ ಗಂಡ ತನ್ನ ಹೆಂಡತಿಯನ್ನು ಹೊತ್ತುಕೊಂಡು ಕೆಸರ ಗದ್ದೆಯಲ್ಲಿ ಓಡಬೇಕು!

          ಇಂಥ ಒಂದು ಸ್ಪರ್ಧೆ ತೀರಾ ಅಪರೂಪದ್ದು. ಪಶ್ಚಿಮ ಕರಾವಳಿಗಂತೂ ಹೊಸದೇ. ಪ್ರಾಯ: ದೇಶಕ್ಕೂ.

          ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವು ಗ್ರಾಮದ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಶ್ರಯದಲ್ಲಿ ಕಳೆದ ವರ್ಷ ಏರ್ಪಡಿಸಲಾಗಿದ್ದ ವಿಶಿಷ್ಟ , ಮೋಜಿನ ಸ್ಪರ್ಧೆಯಿದು. ಈ ಬಾರಿಯೂ (ಫೆ.17,18,19) ಈ ಸ್ಪರ್ಧೆ ನಡೆಯಲಿದೆ.

          ಸಾಮಾನ್ಯವಾಗಿ ಗಂಡು ಹೆಣ್ಣಿಗಿಂತ ಬಲಶಾಲಿ ಎಂಬ ಅಂಬೋಣವಿದೆ. ಹಾಗಾಗಿ ಹೆಣ್ಣನ್ನು ಗಂಡು ಹೊತ್ತು ಕೊಂಡು ಓಡುವುದೇನು ಮಹಾ ಎನ್ನಬಹುದು. ಆದರೆ ಗಂಡಿಗಿಂತ ಸ್ಥೂಲ ಶರೀರಿಯಾಗಿರುವ ಹೆಣ್ಣನ್ನು ಹೊರುವುದೇ ಕಷ್ಟ; ಇನ್ನು ಹೊತ್ತುಕೊಂಡು

          ಓಡುವುದಂತೂ ತ್ರಾಸದಾಯಕವೇ.

          ಶತಮಾನಗಳ ಹಿನ್ನೆಲೆಯಿರುವ ಶಾಸ್ತಾವು ದೇವಳವು ಕ್ಷೇತ್ರದ ಆಡಳಿತ ಮೊಕ್ತೇಸರ, ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ ಅವರ ಚಿಂತನೆ, ಪರಿಶ್ರಮಗಳ ಕಾರಣದಿಂದ ಪುರಾತನ ಶೈಲಿಯ ದೇಗುಲವಾಗಿ ವರುಷಗಳ ಹಿಂದೆ ಜೀರ್ಣೋದ್ಧಾರಗೊಂಡಿತು. ದೇವಳವನ್ನು ಜನ ಮನದ ಆರಾಧನಾಕೇಂದ್ರವಾಗಿಸಬೇಕು ಎಂಬ ಆಶಯ ಹೊತ್ತ ವಿಜಯನಾಥ ಶೆಟ್ಟಿ ಅವರು ಈ ದಿಸೆಯಲ್ಲಿ ದೇವಳದ ಅವರಣದಲ್ಲಿ ನಿತ್ಯ ನಿರಂತರವೆಂಬಂತೆ ಜನ ಮನ ಸೆಳೆಯುವ ಆದರೆ ಸಾಂಸ್ಕೃತಿಕ ಮೌಲ್ಯಗಳೂ ಬೆಸೆದುಕೊಂಡಿರುವ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಅವುಗಳಲ್ಲಿ ಕಳೆದ ಸಾಲಿನಲ್ಲಿ ನಡೆಸಿದ ಗ್ರಾಮೀಣ ಸ್ಪರ್ಧೆಗಳಂತೂ ಗ್ರಾಮದ ಮಾತ್ರವಲ್ಲ ನಾಡಿನ ಉದ್ದಗಲಕ್ಕೂ ಪ್ರಚಾರ ಪಡೆದುಕೊಂಡವು. ಮರೆತು ಹೋಗುತ್ತಿರುವ ಗ್ರಾಮೀಣ ಆಟೋಟಗಳೆಲ್ಲ ಶಾಸ್ತಾವು ದೇವಳದ ಆವರಣದಲ್ಲಿ ಮರು ಜೀವ, ಮರು ಹುಟ್ಟು ಪಡೆದವು. ಹೀಗೂ ಇತ್ತಲ್ಲ ನಮ್ಮ ಜಾನಪದ ಆಟ, ವಿನೋದಗಳ ಸೊಗಸು ಎಂದು ಆಧುನಿಕರು ಅಚ್ಚರಿ ಅಭಿಮಾನಗಳಿಂದ ಅವುಗಳಲ್ಲಿ ಪಾಲ್ಗೊಳ್ಳಲು ಮುಂದೆ ಬಂದರು. ಅಂಥ ಆಟೋಟಗಳಲ್ಲಿ ಬಹಳ ಮೋಜು, ಒಂದಿಷ್ಟು ದೈಹಿಕ ಪರಿಶ್ರಮದ ಆಟವಾಗಿ ಜನರನ್ನು ರಂಜಿಸಿದ್ದೇ ' ಕೆಸರುಗದ್ದೆಯಲ್ಲಿ ಜೋಡಿ ಓಟ'

          ಕಳೆದ ಬಾರಿ ಸುಮಾರು ಹತ್ತು ಜೋಡಿಗಳು ಈ ಗಮ್ಮತ್ತಿನ ಓಟದಲ್ಲಿ ಪಾಲ್ಗೊಂಡಿದ್ದವು. ಗಂಡಸರಂತೂ ಅರೆ ಮುಜುಗರ, ಒಂದಿನಿತು ಖುಷಿಯಿಂದ ಛಲದಂಕ ಮಲ್ಲರಾಗಿ ಹೆಂಡತಿಯನ್ನು ಹೊತ್ತುಕೊಂಡು ಸುಮಾರು 75 ಮೀಟರ್‌ ಉದ್ದದ ಕೆಸರುಗದ್ದೆಯ ಟ್ರಾಕ್‌ನಲ್ಲಿ ಓಡಿದರು. ಗಂಡನ ಬೆನ್ನೇರಿ ತಮ್ಮ ತೋಳುಗಳಿಂದ ಗಂಡನಿಗೆ ತೋಳಬಂದಿ ತೊಡಿಸಿದ ಮಡದಿಯರನೇಕರು, ಶೀಟಿ ಹೊಡೆಯುತ್ತ, ತಮಾಶೆಯಿಂದ ಬೊಬ್ಬೆ ಹಾಕುತ್ತ ಇದ್ದ ವೀಕ್ಷಕರರತ್ತ ನೋಡಲೇ ಇಲ್ಲ! ಕೆಲವರಷ್ಟೇ ಜನರ ಖುಷಿಯೊಂದಿಗೆ ತಾವೂ ಖುಷಿಯಿಂದ ನಸುನಗುತ್ತ ಜತೆಗಾರ ಗಂಡ ಗುರಿ ತಲುಪುವವರೆಗೂ ಸ್ಪರ್ಧೆಗೆ ರಂಗೇರಿಸಿದರು. ಈ ಖುಷಿಯಲ್ಲಿ ತಮ್ಮ ಸೀರೆ, ಗಂಡನ ಕಚ್ಚೆ ಪಂಚೆ ಕೆಸರು ಮಣ್ಣು ಅಂಟಿಸಿಕೊಂಡದ್ದು ಗೊತ್ತೇ ಆಗಲಿಲ್ಲ.

          ಹೀಗೆ ನಡೆದ ಸ್ಪರ್ಧೆಯಲ್ಲಿ ಗೆದ್ದವರಿಗೆ ಚಿನ್ನದ ಪದಕ, ನಗದು ಬಹುಮಾನ ಎಲ್ಲಕ್ಕಿಂತ ಮುಖ್ಯವಾಗಿ ಜನರನ್ನು ರಂಜಿಸಿದ ಸಂತೋಷ ಎಲ್ಲವೂ ಪ್ರಾಪ್ತಿಯಾಗಿತ್ತು. ಏಕೆಂದರೆ ಈ 'ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ' ಉಪ ಶೀರ್ಷಿಕೆಯೇ ಹೀಗಿದೆ-

          ' ಮನಸ್‌Õದ ಉಲ್ಲಾಸೊಗು ಬೋಡಾದ್‌ ಎಂಚಿನಲಾ ಮಲ್ಪುವ'!

          ಪ್ರಾರಂಭದ ವರುಷವಾದುದರಿಂದ ಎಡಪದವು, ಮಿಜಾರು, ಗಂಜಿಮಠ ಮೊದಲಾದ ಪರಿಸರದಿಂದ ಕೆಲವೇ ಜೋಡಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮನಸ್ಸು ಮಾಡಿದ್ದಿರಬೇಕು. ಈ ಬಾರಿ ಇತರ 40 ಬಹುವರ್ಣ ರಂಜಿತ ಸ್ಪರ್ಧೆಗಳ ಜತೆಗೆ ಈ ' ಜೋಡಿ ಓಟ ಅಥವಾ ದಂಪತಿ ಒಟ'ದ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ.



No comments:

Post a Comment